ಪಠ್ಯಪುಸ್ತಕ ವಿತರಣೆ
ಎಚ್.ಡಿ. ಕೋಟೆ: ತಾಲೂಕು ಕಸಬಾ ಹೋಬಳಿ ನಂಜನಾಯಕಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸರ್ಕಾರ ನೀಡಿರುವ ಉಚಿತ ಪಠ್ಯಪುಸ್ತಕಗಳನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎನ್.ಎಂ. ಮಹದೇವಸ್ವಾಮಿ ವಿತರಿಸಿದರು. ನಂತರ ಮಾತನಾಡಿದ ಅವರು, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಬೇಕು ಎಂದು ಕರೆ ನೀಡಿದರು.
ಚಿರತೆ ದಾಳಿ
ಹುಣಸೂರು: ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಕುರಿ ಹಾಗೂ ಕರು ಮೇಲೆ ಚಿರತೆಯೊಂದು ದಾಳಿ ನಡೆಸಿ ತಿಂದಿರುವ ಘಟನೆ ತಾಲೂಕಿನ ಬಿಳಿಕೆರೆ ಹೋಬಳಿಯ ಅಸ್ವಾಳ್ ಬಳಿಯ ದೈತ್ಯನ ಕೆರೆ ಕಾವಲ್ನಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಕಾಂಗ್ರೆಸ್ ಮುಖಂಡ ಮರೀಗೌಡರ ತೋಟದ ಮನೆ ಬಳಿ ನಡೆದಿದ್ದು ಚಿರತೆ ದಾಳಿಯಿಂದ ಗಾಬರಿಗೊಂಡು ಕೂಗಿಕೊಂಡಾಗ, ಬೆದರಿ ಓಡಿ ಹೋಯಿತು. ಈ ಭಾಗದಲ್ಲಿ ಸಾಕಷ್ಟು ಚಿರತೆಗಳಿದ್ದು ಜನರು ಭಯ ಭೀತಿಗೊಂಡಿದ್ದಾರೆ. ಅರಣ್ಯ ಇಲಾಖೆಯವರು ಚಿರತೆಗಳನ್ನು ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಒಂಬತ್ತು ಕೋಳಿ ಅಂಗಡಿಗಳಿಗೆ ಬೀಗ
ಹುಣಸೂರು: ಪುರಸಭೆಗೆ ಬಾಡಿಗೆ, ತೆರಿಗೆ, ವಿದ್ಯುತ್ ಬಿಲ್ ಬಾಕಿ ಇಟ್ಟುಕೊಂಡಿರುವ ಹಾಗೂ ಲೈಸೆನ್ಸ್ ನವೀಕರಣ ಮಾಡಿಸದ ಪಟ್ಟಣದ 9 ಕೋಳಿ ಅಂಗಡಿ ಹಾಗೂ 5 ಐಡಿಎಸ್ಎಂಡಿ ಮಳಿಗೆಗಳಿಗೆ ಬೀಗ ಜಡಿಯಲಾಗಿದೆ ಮುಖ್ಯಾಧಿಕಾರಿ ಹರೀಶ್ ತಿಳಿಸಿದ್ದಾರೆ. ಪಟ್ಟಣದ ಹಲವು ಪುರಸಭಾ ಮಳಿಗೆಯವರು ಹಾಗೂ ಖಾಸಗಿ ಅಂಗಡಿಯವರು ಬಾಕಿ ಉಳಿಸಿಕೊಂಡಿದ್ದು, ಶೀಘ್ರ ಮತ್ತೆ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು. ಕಾರ್ಯಾಚರಣೆಯಲ್ಲಿ ರಾಜಸ್ವ ನಿರೀಕ್ಷಕ ಸೋಮಶೇಖರ್, ಬಿಲ್ ಕಲೆಕ್ಟರ್ ಮಹದೇವ, ಸಿಬ್ಬಂದಿ ಭಾಗವಹಿಸಿದ್ದರು.
ಕಾಡು ಹಂದಿ ದಾಳಿ ಇಬ್ಬರಿಗೆ ಗಾಯ
ಎಚ್.ಡಿ. ಕೋಟೆ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಕಾಡು ಹಂದಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ತಾ. ಅಂತರಸಂತೆಯಲ್ಲಿ ನಡೆದಿದೆ. ಗ್ರಾಮದ ನಾಗಮ್ಮ (28) ಹಾಗೂ ಪುಟ್ಟತಿಮ್ಮಮ್ಮ ಗಾಯಗೊಂಡವರು. ಪುಟ್ಟತಿಮ್ಮಮ್ಮ ಅವರಿಗೆ ಸಣ್ಣಪುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ನಾಗಮ್ಮ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.