ಮೈಸೂರಿಗೆ ಬಂದ 'ಸ್ಪೆಷಲ್' ಹುಡುಗ
ಕ.ಪ್ರ.ವಾರ್ತೆ ಮೈಸೂರು ಜೂ. 2
ಡೈರೆಕ್ಟರ್ ಸ್ಪೆಷಲ್ ಚಿತ್ರದ ನಾಯಕ ಧನಂಜಯ್ ಭಾನುವಾರ ಮೈಸೂರಿಗೆ ಆಗಮಿಸಿ ಪ್ರೇಕ್ಷಕರೊಂದಿಗೆ ಚಿತ್ರ ವೀಕ್ಷಿಸಿದರು.
ನಗರದ ಗಾಯತ್ರಿ ಚಿತ್ರಮಂದಿರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಭಿಮಾನಿಗಳು ಹೂಮಾಲೆ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು.
ಜ್ಞಾನಾರ್ಜನೆಗಾಗಿ ದೂರದ ಅರಸೀಕೆರೆಯಿಂದ ಮೈಸೂರಿಗೆ ಬಂದು ರಂಗಾಯಣದ ನಂಟು ಬೆಳೆಸಿಕೊಂಡಿದ್ದ ಧನಂಜಯ್, ತನ್ನ ಪ್ರತಿಭೆಯಿಂದ ನಿರ್ದೇಶಕ ಗುರುಪ್ರಸಾದ್ ಗಮನಕ್ಕೆ ಬಂದರು. ಆತನನ್ನು ಹೀರೋ ಆಗಿ ಮಾಡುತ್ತೇನೆ ಎಂದು ಶಪಥ ಮಾಡಿದ್ದ ಗುರುಪ್ರಸಾದ್ ತಮ್ಮ ಡೈರೆಕ್ಟರ್ ಸ್ಪೆಷಲ್ ಚಿತ್ರದ ನಾಯಕನ ಪಟ್ಟ ನೀಡಿ ಇಂದು ಕರ್ನಾಟಕ ರಾಜ್ಯಕ್ಕೆ ಪರಿಚಯಿಸಿದ್ದಾರೆ.
ಇದೆಲ್ಲದರ ಖುಷಿಯಿಂದಲೇ ಮೈಸೂರಿಗೆ ಆಗಮಿಸಿದ್ದ ಧನಂಜಯ್ ಸುದ್ದಿಗಾರರೊಂದಿಗೆ ಮಾತನಾಡಿ, ಡೈರೆಕ್ಟರ್ ಸ್ಪೆಷಲ್ ಚಿತ್ರಕ್ಕೆ ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದರಿಂದ ನನಗೆ ಸಂತೋಷವಾಗಿದೆ. ಹೊಸಬರು ಚಿತ್ರರಂಗದಲ್ಲಿ ನೆಲೆ ನಿಲ್ಲುವುದು ಕಷ್ಟವಾಗಿರುವ ಇಂತಹ ಸನ್ನಿವೇಶದಲ್ಲಿ ಗುರುಪ್ರಸಾದ್ ಅಂತಹ ನಿರ್ದೇಶಕರು ಪ್ರತಿಭೆಯನ್ನು ಗುರುತಿಸಿ ಅವಕಾಶ ಕೊಟ್ಟಿರುವುದು ನನ್ನ ಸುದೈವ ಎಂದರು.
ನಾನು ಬೆಳೆದ ಮೈಸೂರಿಗೆ ಬಂದು ಅಭಿಮಾನಿಗಳ ಸನ್ಮಾನ ಸ್ವೀಕರಿಸಿದ್ದು ನನಗೆ ಖುಷಿಯಾಗಿದೆ. ಮಂಗಳವಾರ ನನ್ನ ಹುಟ್ಟೂರಾದ ಅರಸೀಕೆರೆ ತಾಲೂಕಿನ ಕಾಳೇನಹಳ್ಳಿಗೆ ಹೋಗುತ್ತೇನೆ. ಈ ದಿನಕ್ಕಾಗಿ ನಾನು ತುಂಬಾ ಕಾದಿದ್ದೀನೆ, ಶ್ರಮ ಪಟ್ಟಿದ್ದೀನೆ. ಇದೆಲ್ಲವೂ ನನ್ನ ಗುರುಗಳಾದ ಮೈಮ್ ರಮೇಶ್ ಅವರಿಗೆ ಸಲ್ಲಬೇಕು. ಮೈಸೂರು ನನಗೆ ಜೀವನ ನೀಡಿದೆ. ನಾನು ಯಾವುದೇ ಅವಕಾಶಕ್ಕಾಗಿ ಹುಡುಕಿ ಹೊರಡಲಿಲ್ಲ. ನಾಟಕದಲ್ಲಿನ ನನ್ನ ಅಭಿನಯ ನೋಡಿ ಗುರುಪ್ರಸಾದ್ ಅವರು ತಮ್ಮ ಅನಿಮೇಷನ್ ಚಿತ್ರದಲ್ಲಿ ಮಹಾರಾಜನ ಪಾತ್ರ ನೀಡಿದರು. ನಂತರ ಡೈರೆಕ್ಟರ್ ಸ್ಪೆಷಲ್ನಲ್ಲಿ ಅವಕಾಶ ನೀಡಿದರು ಎಂದು ಸ್ಮರಿಸಿದರು.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಜನಿಸಿ, ಅಲ್ಲೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿದೆ. ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯುಸಿ, ಎಸ್ಜೆಸಿಇ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿ ಇನ್ಫೋಸಿಸ್ನಲ್ಲಿ ಕೆಲಸಕ್ಕೆ ಸೇರಿಕೊಂಡೆ.
ಆದರೂ ರಂಗಭೂಮಿ ನಂಟು ಬಿಡದ ನಾನು ಮೈಮ್ ರಮೇಶ್ ಸಾರಥ್ಯದ ಜಿಪಿಐಇಆರ್ ತಂಡ ಸೇರಿಕೊಂಡು ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಅವರ ಏಕಲವ್ಯ ನಾಟಕದಲ್ಲಿ ದ್ರೋಣಾಚಾರ್ಯರ ಪಾತ್ರ ನಿರ್ವಹಿಸಿದ್ದೆ. ನನ್ನ ಅಭಿನಯ ನೋಡಿದ್ದ ಮೈಮ್ ರಮೇಶ್ ಅವರು ನೀನು ಒಳ್ಳೆಯ ನಟನಾಗುತ್ತೀಯೆಂದು ಹರಿಸಿದ್ದರು ಎಂದರು.
ರಂಗಾಯಣ ಕಲಾವಿದ ಮೈಮ್ ರಮೇಶ್, ಚಿತ್ರಕಲಾವಿದ ಬಾದಲ್ ನಂಜುಂಡಸ್ವಾಮಿ, ಮಂಜುನಾಥ್, ರವಿಪ್ರಸಾದ್ ಇದ್ದರು.