ಸಾಧಾರಣ ಸುರಿದ ಮಳೆ
ಕ.ಪ್ರ.ವಾರ್ತೆ ಮೈಸೂರು ಜೂ. 2
ನಗರದಲ್ಲಿ ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೆ ಕಣ್ಣಾಮುಚ್ಚಾಲೆಯೊಂದಿಗೆ ಸಾಧಾರಣ ಮಳೆ ಸುರಿಯಿತು.
ನಗರದಾದ್ಯಂತ ಮೋಡ ಕವಿದ ವಾತಾವರಣವಿದ್ದು, ಬೆಳಗ್ಗೆಯಿಂದಲೂ ಜಿಟಿ ಜಿಟಿ ಬೀಳುತ್ತಿತ್ತು. ಇದರ ಪ್ರಮಾಣ ಮಧ್ಯಾಹ್ನದ ವೇಳೆಗೆ ಹೆಚ್ಚಾಯಿತು. ಕೆಲವು ಗಂಟೆಗಳ ಕಾಲ ಬಿಡುವು ನೀಡಿ ಸುರಿಯಿತು. ದಿನವಿಡಿ ಮಳೆಯಾದ್ದರಿಂದ ಹಾಗೂ ಚಳಿ ಇದ್ದುದ್ದರಿಂದ ನಾಗರಿಕರು ಮನೆ ಬಿಟ್ಟು ಹೊರ ಬರಲಿಲ್ಲ. ಮಳೆಯಿಂದ ರಸ್ತೆ ತುಂಬೆಲ್ಲಾ ನೀರು ನಿಂತಿತ್ತು.
ಮೈಸೂರು ಜಿಲ್ಲೆಯ ಸುತ್ತಮುತ್ತಲ ಪ್ರದೇಶಗಳಾದ ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಗಳಲ್ಲಿ ಜೂ.3 ರಿಂದ 6 ರವರೆಗೆ ಗುಡುಗು ಮಿಂಚು ಸಹಿತ ಭಾರಿ ಮಳೆ ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರಾಧೀಕ್ಷಕ ಡಾ.ಸಿ. ಗೋವಿಂದರಾಜು ತಿಳಿಸಿದ್ದಾರೆ.ಶನಿವಾರದಂದು ನಗರದಲ್ಲಿ 19 ಮಿ.ಮೀ. ಮಳೆಯಾಗಿದ್ದು, ಇನ್ನೂ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗಲಿದೆ. ಈ ಅವಧಿಯಲ್ಲಿ ರೈತರು ಉಳುಮೆಗೆ ಸಿದ್ಧರಾಗಬಹುದು. ಉದ್ದು, ಹೆಸರು, ಅಲಸಂದೆ, ರಾಗಿ, ಮೆಕ್ಕೆ ಜೋಳ ಬಿತ್ತನೆ ಮಾಡಬಹುದು. ಜಾನುವಾರುಗಳಿಗೆ ಆಹಾರವಾಗಿ ಹುಲ್ಲನ್ನು ಬೆಳೆಯಬಹುದು. ಜಮೀನಿನಲ್ಲಿ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವಂತೆ ಅವರು ರೈತರಿಗೆ ಸಲಹೆ ನೀಡಿದ್ದಾರೆ.