ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ
ಕ.ಪ್ರ.ವಾರ್ತೆ ಕೆ.ಆರ್. ನಗರ ಜೂ. 3
ತಾಲೂಕಿನ ಹೆಬ್ಬಾಳು ಹೋಬಳಿ ಕೇಂದ್ರದಲ್ಲಿ ಸರ್ಕಾರಿ ಜಾಗವನ್ನು ಎಪಿಎಂಸಿಗೆ ನೀಡಿದರೆ ಒಂದು ಕೋಟಿ ವೆಚ್ಚದಲ್ಲಿ ಹೈಟೆಕ್ ಉಪ ಮಾರುಕಟ್ಟೆಯನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಎಪಿಎಂಸಿ ಅಧ್ಯಕ್ಷ ರಮೇಶ್ ಹೇಳಿದರು.
ಹೆಬ್ಬಾಳು ಗ್ರಾಮಕ್ಕೆ ಭೇಟಿ ನೀಡಿ ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಮಾಡುವ ರೈತರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮದಲ್ಲಿ ರೈತರಿಗೆ ದಲ್ಲಾಳಿಗಳಿಂದ ಅನ್ಯಾಯವಾಗುತ್ತಿದ್ದು, ಕೆ.ಆರ್. ನಗರ ಮಾರುಕಟ್ಟೆಗೆ ಬಂದು ತರಕಾರಿ ಮಾರಾಟ ಮಾಡಿದರೆ ಎಲ್ಲ ಸವಲತ್ತು ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.
ರೈತರು ಎಪಿಎಂಸಿಗೆ ದೂರು ನೀಡಿ ಹೆಬ್ಬಾಳಿನಲ್ಲಿ ವ್ಯಾಪಾರಿಗಳಿಗೆ ಮಧ್ಯವರ್ತಿಗಳಿಂದ ತುಂಬಾ ಅನ್ಯಾಯವಾಗುತ್ತಿದ್ದು, ತೂಕ ಮತ್ತು ಬೆಲೆಯಲ್ಲಿ ಮೋಸವಾಗುತ್ತಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ನಾನು ಕೃಷಿ ಉತ್ಪನ್ನ ಮಾರುಕಟ್ಟೆಯ ಜಿಲ್ಲಾ ಸಹಾಯಕ ನಿರ್ದೇಶಕಿ ವಿಜಯಲಕ್ಷಿ ಮತ್ತು ಆಡಳಿತ ಮಂಡಳಿಯ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಮುಂದೆ ಎಪಿಎಂಸಿಯಿಂದ ರೈತರಿಗೆ ಆಗುವ ಅನುಕೂಲ ಕಲ್ಪಿಸಿಕೊಡಲಾಗುತ್ತದೆ ಎಂದು ಹೇಳಿದರು.
ವ್ಯಾಪಾರ ಮಾಡಲು ರೈತರು ತರಕಾರಿ ತಂದರೆ ಅವರಿಗೆ ವಂಚಿಸಿ ಕೇವಲ ನಾಲ್ಕೈದು ಮಂದಿ ಮಧ್ಯವರ್ತಿಗಳು ಕುಳಿತು ಬೆಲೆ ನಿಗದಿ ಮಾಡುತ್ತಾರೆ. ಇದರಿಂದ ನಿಜವಾದ ಬೆಳೆಗಾರರಿಗೆ ಅನ್ಯಾಯವಾಗುತ್ತಿದ್ದು, ಇದನ್ನು ಸರಿಪಡಿಸಿ ಮಾರುಕಟ್ಟೆ ನಿರ್ಮಾಣ ಮಾಡಲು ಜಿಲ್ಲಾಡಳಿತ ಮತ್ತು ಕ್ಷೇತ್ರದ ಶಾಸಕರು ಸಹಕಾರ ನೀಡಬೇಕು ಎಂದು ಕೋರಿದರು. ನಂತರ ಅವರು ವ್ಯಾಪಾರಿಗಳು, ವರ್ತಕರು ಹಾಗೂ ರೈತರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ, ಅವರ ಸಮಸ್ಯೆಗಳನ್ನು ಆಲಿಸಿ ಎಪಿಎಂಸಿಯಿಂದ ಕೈಗೊಳ್ಳಬಹುದಾದ ರೈತಪರ ಕೆಲಸಗಳ ಬಗ್ಗೆ ಚರ್ಚಿಸಿದರು. ನಿರ್ದೇಶಕರಾದ ತೋಟಪ್ಪನಾಯಕ, ಚಂದಗಾಲು ನಂಜುಂಡಸ್ವಾಮಿ, ಪ್ರಸನ್ನ, ಕಾರ್ಯದರ್ಶಿಗಳಾದ ಬಸವರಾಜು, ಸುರೇಶ್ಬಾಬು ಇದ್ದರು.