ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ ಬಿತ್ತು
ಸುತ್ತೂರು: ನಂಜನಗೂಡು ತಾಲೂಕಿನ ಹದಿನಾರು ಗ್ರಾಮದಲ್ಲಿ ಸೋಮವಾರ ಮುಂಜಾನೆ ಗೂಳಪ್ಪ ಎಂಬವರ ತೋಟದಲ್ಲಿ ಐದು ವರ್ಷದ ಗಂಡು ಚಿರತೆಯು ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದಿದೆ. ಗ್ರಾಮದ ಗೂಳಪ್ಪ ಎಂಬವರ ಜಮೀನಿನಲ್ಲಿ ಇದುವರೆಗೂ ಎಂಟು ನಾಯಿಗಳನ್ನು ತಿಂದು ಹಾಕಿತ್ತು. ಗ್ರಾಮದ ಭಾರತಿಸ್ವಾಮಿ ಮನೆಯಲ್ಲಿ ಒಂದು ಹಸು ಹಾಗೂ ಕರುಗಳನ್ನು ಈ ಚಿರತೆ ದಾಳಿ ನಡೆಸಿ, ತಿಂದಿದ್ದರಿಂದ ಈ ಭಾಗದ ಜನರು ಭಯಗೊಂಡಿದ್ದರು. ಸೋಮವಾರ ಬೆಳಗ್ಗೆ ಚಿರತೆ ಸೆರೆ ಸಿಕ್ಕಿದ್ದರಿಂದ ಗ್ರಾಮಸ್ಥರು ನಿಟ್ಟುಸಿರುವ ಬಿಟ್ಟರು. ಇನ್ನು ಮೂರು ಚಿರತೆ ಈ ಕಾಡಿನಲ್ಲಿ ಇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಹದಿನಾರು ಹಾಗೂ ಸುತ್ತಮುತ್ತಲ ಗ್ರಾಮಗಳ ಜನರು ರಾತ್ರಿ ವೇಳೆ ಹೊಲ- ಗದ್ದೆಗಳಿಗೆ ಹೋಗಲು ಭಯಪಡಬೇಕಾಗಿದೆ. ಇಲಾಖೆಯವರು ಇನ್ನು ಐದು ಬೋನುಗಳನ್ನಾದರೂ ನಮಗೆ ನೀಡಬೇಕೆಂದು ಗ್ರಾಮದ ಪ್ರಮೋದ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಜಿಪಂ ಮಾಜಿ ಸದಸ್ಯ ಎಚ್.ಎನ್. ನಂಜಪ್ಪ ಅರಣ್ಯಾಧಿಕಾರಿಗಳನ್ನು ಕೋರಿದರು. ಅರಣ್ಯಾಧಿಕಾರಿಗಳಾದ ಜಯಶಂಕರ್, ಮಹೇಶ್ ರಾತ್ರಿ ಹಾಜರಿದ್ದು, ಚಿರತೆಯನ್ನು ವಾಹನ ಮೂಲಕ ಬಂಡಿಪುರ ಅರಣ್ಯಕ್ಕೆ ಸಾಗಿಸಿ, ಬಿಡುಗಡೆ ಮಾಡಿದರು.