ವಿದ್ಯಾರ್ಥಿಗಳಿಗೆ ಮತದಾನ ಅರಿವು
ಕ.ಪ್ರ.ವಾರ್ತೆ ಮೈಸೂರು ಜೂ. 3
ದೇಶದ ಭಾವಿ ಪ್ರಜೆಗಳಿಗೆ ಮತದಾನದ ಅರಿವು ಮೂಡಿಸಲು ಮೈಸೂರಿನ ಕೌಟಿಲ್ಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆಧುನಿಕ ಚುನಾವಣಾ ವ್ಯವಸ್ಥೆಯಲ್ಲಿ ಬಳಕೆಯಲ್ಲಿರುವ ಎಲೆಕ್ಟ್ರಾನಿಕ್ ಮತಯಂತ್ರಗಳ ಮೂಲಕ ತಮ್ಮ ಮತ ಚಲಾಯಿಸುವ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಇದಕ್ಕಾಗಿ ವಿದ್ಯಾರ್ಥಿ ಪ್ರತಿನಿಧಿಗಳ ಪಟ್ಟಿಯನ್ನು ಅವರ ಫೋಟೋ ಸಮೇತ ಕಂಪ್ಯೂಟರ್ನಲ್ಲಿ ಸಿದ್ಧಪಡಿಸಿ, ಪ್ರತಿ ವಿದ್ಯಾರ್ಥಿಯೂ ತನ್ನ ಆಯ್ಕೆಯ ಪ್ರತಿನಿಧಿಗಳಿಗೆ ಕಂಪ್ಯೂಟರ್ ಮೂಲಕವೇ ಮತ ಚಲಾಯಿಸುವ ವಿನೂತನ ಪದ್ಧತಿ ಪರಿಚಯಿಸಿದ್ದು ಶಾಲಾ ಚುನಾವಣೆಯ ವಿಶೇಷವಾಗಿತ್ತು.
ವಿದ್ಯಾರ್ಥಿಗಳು ಪ್ರಬುದ್ಧ ಮತದಾರರಂತೆ ಶಿಸ್ತುಬದ್ಧವಾಗಿ ಸಾಲಿನಲ್ಲಿ ನಿಂತು ಕಿಂಚಿತ್ತೂ ಗೊಂದಲವಿಲ್ಲದೆ ಉತ್ಸುಕತೆಯಿಂದ ತಮ್ಮ ತಮ್ಮ ಮತ ಚಲಾಯಿಸಿದರು.
4 ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಮತದಾನದಲ್ಲಿ ಬಾಲಕರ ವಿಭಾಗದ ಮುಖ್ಯಸ್ಥ ಸ್ಥಾನಕ್ಕೆ ವಿ. ಅಂಕುಶ್, ರೋಹನ್ ನಾಗೇಶ್, ಎಂ.ವಿ. ರೋಹಿತ್ ಮತ್ತು ಅಹಮದ್ ಅಬ್ದುಲ್ಲಾ ಆಸೀಫ್ ಸ್ಪರ್ಧಿಸಿದ್ದು, ಇವರಲ್ಲಿ ವಿ. ಅಂಕುಶ್ ಜಯ ಸಾಧಿಸಿದರು.
ಬಾಲಕಿಯರ ವಿಭಾಗದ ಮುಖ್ಯಸ್ಥೆ ಸ್ಥಾನಕ್ಕೆ ಪಿ.ಕೆ. ಜೋಶಿಕಾ, ಎಂ. ವಾಗ್ದಾ ರಾವ್, ಜೆ.ಎನ್. ಅನನ್ಯ ಮತ್ತು ಡಿ.ಟಿ. ಲಿಖಿತಾ ಸ್ಪರ್ಧಿಸಿದ್ದು, ಇವರಲ್ಲಿ ಜೆ.ಎನ್. ಅನನ್ಯ ಗೆಲವು ಸಾಧಿಸಿದರು.
ಸಾಂಸ್ಕೃತಿಕ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಮಥ ವಿ. ನಾರಾಯಣ, ಯೋಗಾಂಶು ಬಾಲರಾಜ್, ಕೆ.ಎನ್. ವೈಷ್ಣವಿ ಮತ್ತು ಮಿಂಚು ಜೋಶಿ ಪೈಕಿ ಯೋಗಾಂಶು ಬಾಲರಾಜ್ ಹಾಗೂ ಕ್ರೀಡಾ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಡಿ. ಸುಶೀಲ್, ಸಿ.ಕೆ. ಜೀವನ್, ಎಂ. ಐಶ್ವರ್ಯ ಮತ್ತು ಅಮಿತ್ ಗೌತಮ್ ಪೈಕಿ ಸಿ.ಕೆ. ಜೀವನ್ ಜಯ ಗಳಿಸಿದರು.
ಮಿತ ಪ್ರಮಾಣದ ಕಾಗದ, ಕಡಿಮೆ ಮಾನವ ಸಂಪನ್ಮೂಲ ಹಾಗೂ ಆಧುನಿಕ ತಂತ್ರಜ್ಞಾನದ ದಕ್ಷ ಬಳಕೆ ಮಾಡಿಕೊಂಡು ಸಂಪೂರ್ಣ ಮತದಾನ ಪ್ರಕ್ರಿಯೆಯು 2 ಗಂಟೆಗಳ ಅವಧಿಯಲ್ಲಿ ಮುಕ್ತಾಯಗೊಂಡಿತು.
ಈ ಸಾಲಿನ ಚುನಾವಣಾ ಸಮಿತಿಯ ಉಸ್ತುವಾರಿ ವಹಿಸಿದ್ದ ವಿದ್ಯಾಲಯದ ಶಿಕ್ಷಕರಾದ ಮೊಹಮ್ಮದ್ ಹುಮಾಯೂನ್ ಮತ್ತು ಜಯಂತ್ ಅವರು ಮತದಾನ ಪ್ರಕ್ರಿಯೆಯನ್ನು ಸಂಪೂರ್ಣ ಗಣಕೀಕರಣಗೊಳಿಸುವ ಮೂಲಕ ವಿಶಿಷ್ಟ ಪಾತ್ರ ವಹಿಸಿದರು.
ವಿದ್ಯಾಲಯದ ಅಧ್ಯಕ್ಷ ಆರ್. ರಘು, ಪ್ರಾಂಶುಪಾಲರು ಹಾಗೂ ಕಾರ್ಯದರ್ಶಿ ಎಲ್. ಸವಿತಾ ಇದ್ದರು.