ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಮಾಜ ಸುಧಾರಣೆಗೆ ಪರಿವರ್ತನೆ ಅವಶ್ಯ

Rashmi Kasaragodu
Updated On : 3 Jun 2013, 11:42 am

ಕ.ಪ್ರ.ವಾರ್ತೆ   ಮೈಸೂರು   ಜೂ. 3
ಸಮಾಜ ಸುಧಾರಣೆಗೆ ಜೀವನ ಶೈಲಿಯ ಪರಿವರ್ತನೆ ಅವಶ್ಯಕ ಎಂದು ಬಾಸುದೇವ ಸೋಮಾನಿ ಕಾಲೇಜಿನ ಪ್ರಾಂಶುಪಾಲ ಹಾಗೂ ರಂಗಕರ್ಮಿ ಪ್ರೊ. ಎಸ್.ಆರ್. ರಮೇಶ್ ಹೇಳಿದರು.
ಮೈಸೂರು ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್ ಸೋಮವಾರ ಏರ್ಪಡಿಸಿದ್ದ ಬ್ಯಾಂಕ್ ಸದಸ್ಯರ ಮಕ್ಕಳಿಗೆ 2012-13ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.  
ಪೋಷಕರನ್ನು ಗೌರವಿಸುವ, ಹಿರಿಯರನ್ನು ಸತ್ಕರಿಸುವ ಹಾಗೂ ಮಾನವ ಧರ್ಮ ಪ್ರೀತಿಸುವತ್ತ ಯುವಜನತೆ ಮುಂದಾಗಬೇಕು. ಧರ್ಮ ಎಂದರೆ ಅದು ಕೇವಲ ದೇವಸ್ಥಾನಗಳಿಗೆ ಹೋಗಿ ನಮಸ್ಕರಿಸಿ ಪಾಪ- ಪುಣ್ಯ ಲೆಕ್ಕಾಚಾರ ಮಾಡುವುದಲ್ಲ. ಅದು ಆಧ್ಯಾತ್ಮಿಕ ಹಾಗೂ ಮಾನವೀಯತೆ ಹೊಂದಿರುವ ಧರ್ಮ ಎಂಬುದನ್ನು ಮನಗಾಣಬೇಕು. ನೆರೆಹೊರೆಯವರನ್ನು ಅಪರಿಚಿತರಂತೆ ಕಾಣುವ ಮನೋಭಾವ ದೂರವಾಗಬೇಕು ಎಂದು ತಿಳಿಸಿದರು.
ತಂತ್ರಜ್ಞಾನ ಮುಂದವರಿಯುತ್ತಿದ್ದಂತೆ ಮನಷ್ಯನ ಹೃದಯವಂತಿಕೆ  ಕ್ಷೀಣಿಸುತ್ತಿದೆ. ಯಾವುದೇ ವೈಜ್ಞಾನಿಕತೆಯನ್ನು ಸದುಪಯೋಗ ಪಡಿಸಿಕೊಂಡು ಸಮಾಜದೊಂದಿಗೆ ಉತ್ತಮ ಸಂಬಂಧ ಹೊಂದುವ ಅಗತ್ಯವಿದೆ. ಈ ದಿಸೆಯಲ್ಲಿ ಜೀವನಶೈಲಿಯ ಪರಿವರ್ತನೆಯ ವಾತಾವರಣ ನಿರ್ಮಿಸಿಕೊಂಡು ಯುವಜನತೆ ಮುನ್ನೆಡೆಯಬೇಕು ಎಂದು ಆಶಿಸಿದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಸಿ.ಇ. ನಾಯ್ಡು ಪ್ರಾಸ್ತಾವಿಕ ಮಾತನಾಡಿ, 15 ವರ್ಷಗಳಿಂದ ಪ್ರತಿಭಾ ಪುರಸ್ಕಾರ ವಿತರಿಸುತ್ತಿದ್ದು, ಈ ಹಿಂದೆ ಶೇ. 60 ಕ್ಕೂ ಹೆಚ್ಚಿನ ಅಂಕ ಪಡೆದವರಿಗೆ ಪುರಸ್ಕಾರ ನೀಡಲಾಗುತ್ತಿತ್ತು. ಆದರೆ, ಈಗ ಅದು ಶೇ. 92ಕ್ಕೆ ಬಂದು ನಿಂತಿದೆ ಎಂದರು.
ಶೇ. 6 ರ ಬಡ್ಡಿ ದರದಲ್ಲಿ 15 ಲಕ್ಷದವರಿಗೆ ಶೈಕ್ಷಣಿಕ ಸಾಲ ನೀಡುತ್ತಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ. 90 ಕ್ಕೂ ಹೆಚ್ಚಿನ ಅಂಕ ಗಳಿಸಿರುವ ತಲಾ 20 ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ತೋರಿರುವ ಟಿ.ಎಸ್. ಕಾವೇರಿ, ಎಂ. ಕಾವ್ಯಶ್ರೀ ಹಾಗೂ ಬಿ. ಚಂದನ್ ಅವರಿಗೆ ಪ್ರತಿಭಾ ಪುರಸ್ಕಾರವನ್ನು ನಗದು ಸಹಿತ ವಿತರಿಸಲಾಯಿತು.
ಬ್ಯಾಂಕಿನ ಅಧ್ಯಕ್ಷ ಬಿ.ಆರ್ ನಂದೀಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಎಂ.ಎನ್. ಸುಮನಾ ಸ್ವಾಗತಿಸಿದರು. ವ್ಯವಸ್ಥಾಪಕ ಎ. ರಮೇಶ್ಕುಮಾರ್ ನಿರೂಪಿಸಿದರು. ಮಾಜಿ ಅಧ್ಯಕ್ಷ ಆರ್. ವಿಜಯಶೇಖರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement