ಸಾರಿಗೆ ನೌಕರರ ಜಾಗೃತಿ ಸಮಾವೇಶ
ಮೈಸೂರು: ರಾಜ್ಯ ರಸ್ತೆ ಸಾರಿಗೆ ಇಲಾಖೆ ನೌಕರರು ಹಾಗೂ ನಿವೃತ್ತ ನೌಕರರ ಸಮಸ್ಯೆಗಳನ್ನು ಕುರಿತು ಚರ್ಚಿಸುವ ಸಲುವಾಗಿ ಜೂ. 6 ರಂದು ಸಂಜೆ 4 ಕ್ಕೆ ಇಲ್ಲಿನ ಚಾಮರಾಜ ಜೋಡಿ ರಸ್ತೆಯಲ್ಲಿರುವ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಜಾಗೃತಿ ಸಮಾವೇಶ ಏರ್ಪಡಿಸಲಾಗಿದೆ. ಸಾರಿಗೆ ಸಂಸ್ಥೆಗಳ ನೌಕರರ ಮತ್ತು ನಿವೃತ್ತ ನೌಕರರ ಸಂಘಗಳ ಕ್ಷೇಮಾಭಿವೃದ್ಧಿ ಮಹಾಮಂಡಳ, ಇಪಿಎಫ್ ಪಿಂಚಣಿದಾರರ ಮಹಾಮಂಡಳ ಹಾಗೂ ಕೆಎಸ್ಆರ್ಟಿಸಿ ನೌಕರರು ಮತ್ತು ನಿವೃತ್ತ ನೌಕರರ ಮಹಾಮಂಡಳದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಸಂಸದ ಎಚ್. ವಿಶ್ವನಾಥ್, ಕಾರ್ಮಿಕ ನಾಯಕ ಎಂ. ಮಲ್ಲಯ್ಯ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಸಂಘದ ಸಂಘಟನಾ ಕಾರ್ಯದರ್ಶಿ ಟಿ.ಕೆ. ದೇವರಾಜ್ ತಿಳಿಸಿದ್ದಾರೆ. ದೇಶದ ಸುಮಾರು 5.5 ಕೋಟಿ ಕಾರ್ಮಿಕ ಹಾಗೂ ನಿವೃತ್ತ ಕಾರ್ಮಿಕರಿಗೆ ಪಿಂಚಣಿ ನೀಡುವಲ್ಲಿ ತಾರತಮ್ಯ ಉಂಟಾಗಿದ್ದು, ಈ ತೊಂದರೆ ಕುರಿತು ಹಾಗೂ ಸಾರಿಗೆ ನೌಕರರಿಗೆ ಸಂಪೂರ್ಣ ಉಚಿತ ಬಸ್ ಪಾಸ್ ನೀಡುವ ಕುರಿತು ಚರ್ಚಿಸಲಾಗುವುದು ಎಂದಿದ್ದಾರೆ.