ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎಆರ್‌ಟಿಓ ಕಚೇರಿಯಲ್ಲಿ ಕಂಪ್ಯೂಟರ್ ಆಹುತಿ

Rashmi Kasaragodu
Updated On : 4 Jun 2013, 11:59 am

ಕ.ಪ್ರ.ವಾರ್ತೆ   ಹುಣಸೂರು   ಜೂ. 4 ಕಳೆದ ವಾರದಿಂದ ಬಿದ್ದ ಭಾರಿ ಮಳೆ- ಗಾಳಿ, ಸಿಡಿಲಿಗೆ ಇಲ್ಲಿನ ಸಾರಿಗೆ ಇಲಾಖೆ ಕಚೇರಿಯಲ್ಲಿದ್ದ ಕಂಪ್ಯೂಟರ್ ಸುಟ್ಟು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ಹಾರಂಗಿ ಇಲಾಖೆಗೆ ಸೇರಿದ ಹಳೆ ಕಟ್ಟಡದಲ್ಲಿ ಸಾರಿಗೆ ಇಲಾಖೆ (ಆರ್‌ಟಿಒ ಕಚೇರಿ) ಬಾಡಿಗೆ ಆಧಾರದಲ್ಲಿ ಹುಣಸೂರು ಉಪ ವಿಭಾಗವಾದ ಹುಣಸೂರು, ಎಚ್.ಡಿ. ಕೋಟೆ, ಕೆ.ಆರ್. ನಗರ, ಪಿರಿಯಾಪಟ್ಟಣ ತಾಲೂಕುಗಳ ಉಪ ಕೇಂದ್ರವಾಗಿ ಕೆಲಸ ನಿರ್ವಹಿಸುತ್ತಿದೆ.
ಕಳೆದ ತಿಂಗಳು ಮೇ 30ರಂದು ಬಿದ್ದ ಭಾರಿ ಮಳೆ ಸಿಡಿಲಿಗೆ ಸಾರಿಗೆ ಕಚೇರಿಯಲ್ಲಿದ್ದ ಕಂಪ್ಯೂಟರ್ ಸಂಪೂರ್ಣ ಸುಟ್ಟು ಹೋಗಿತ್ತು. ಈ ಬಗ್ಗೆ ಮೇ 31ರಂದು ಸಾರಿಗೆ ಸಹಾಯಕ ಅಧಿಕಾರಿ ಡಿಸೋಜ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಗಣಕೀಕರಣ ಸೇವೆಗೆ ಗುತ್ತಿಗೆ ಪಡೆದ ಕಂಪನಿಗೆ ಪತ್ರ ವ್ಯವಹಾರ ಮಾಡಿದ್ದು, ಕಂಪನಿ ನೌಕರರನ್ನು ಜೂ. 1ರಂದು ಕಚೇರಿಗೆ ಕರೆಸಿ ಕಂಪ್ಯೂಟರ್ ದುರಸ್ತಿ ಮಾಡಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ಕಾರ್ಯಗಳನ್ನು ಸಾರಿಗೆ ಅಧಿಕಾರಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಸಕಾಲದಲ್ಲಿ ಗ್ರಾಹಕರ ಮಾಹಿತಿಯನ್ನು ಡೇಟಾ ಎಂಟ್ರಿ ಮಾಡಲು ರೂಟರ್ ದುರಸ್ತಿಯಾಗದ ಕಾರಣ ವಿಳಂಬವಾಗುತ್ತಿದೆ ಹಾಗೂ ಮೇ 31 ಮತ್ತು ಜೂ. 1ರಂದು ಸಾರ್ವಜನಿಕರಿಗೆ ಪರಾದಾಡುವಂತಾಯಿತು. ಈಗ ಯಾವುದೆ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಿದ್ದಾರೆ ಎಂದು ನೊಂದ ಸಾರ್ವಜನಿಕರು ಹೇಳುತ್ತಾರೆ.
ತೊಂದರೆಯಾಗದಂತೆ ಕ್ರಮ: ಸಾರಿಗೆ ಇಲಾಖೆ ಕಚೇರಿ ಕಟ್ಟಡ, ಹಾರಂಗಿ ಇಲಾಖೆಗೆ ಸೇರಿದ ಬಾಡಿಗೆ ಕಟ್ಟಡವಾದ್ದರಿಂದ ಯಾವುದೇ ದುರಸ್ತಿ ಮಾಡುವಂತಿಲ್ಲ.
ದುರಸ್ತಿ ಮಾಡಲು ಸಂಬಂಧಿಸಿದ ಕಟ್ಟಡದ ಅಧಿಕಾರಿಗಳಿಗೆ ಮತ್ತು ಸಾರಿಗೆ ಇಲಾಖೆ ಮತ್ತು ಗಣಕೀಕರಣ ಕಂಪನಿಯ ಮುಖ್ಯಸ್ಥರಿಗೆ ಮೌಕಿಕ ಮತ್ತು ಲಿಖಿತವಾಗಿ ಪತ್ರ ವ್ಯವಹಾರ ಮಾಡಿ ರೌಟರ್ ದುರಸ್ತಿ ಮಾಡಿಸಲು ಮನವಿ ಮಾಡಿದ್ದೇನೆ. ಸಕಾಲದಲ್ಲಿ ಡೇಟಾ ಎಂಟ್ರಿ ಹೊರತುಪಡಿಸಿ, ಇನ್ನುಳಿದ ಯಾವುದೆ ಕೆಲಸ- ಕಾರ್ಯಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ಸಹಾಯಕ ಸಾರಿಗೆ ಅಧಿಕಾರಿ ಡಿಸೋಜಾ ಕನ್ನಡಪ್ರಭಕ್ಕೆ ತಿಳಿಸಿದರು.
ಶೀಘ್ರ ದುರಸ್ತಿಗೆ ಕ್ರಮ: ಸಿಡಿಲಿಗೆ ರೌಟರ್ ಸುಟ್ಟು ಹೋಗಿದೆ. ದುರಸ್ತಿ ಮಾಡಿಸಲು ಮಂಡ್ಯದಲ್ಲಿರುವ ಕಾರ್ಖಾನೆಗೆ ಕಳುಹಿಸಲಾಗಿದೆ. ಶೀಘ್ರವೇ ದುರಸ್ತಿಗೆ ಕ್ರಮ ವಹಿಸಲಾಗುತ್ತದೆ. ಆದರೆ, ಕಚೇರಿ ತುಂಬ ಹಳೆಯ ಕಟ್ಟಡವಾಗಿದ್ದು, ವಿದ್ಯುತ್ ಭೂ ಸಂಪರ್ಕ ನಶಿಸಿ ಹೋಗಿದ್ದರಿಂದ ರೌಟರ್ ಅಳವಡಿಸಲು ಸಾಧ್ಯವಾಗುವುದಿಲ್ಲ. ಹೊಸದಾಗಿ ವಿದ್ಯುತ್ ಭೂಸಂಪರ್ಕ ಪಡೆದ ಬಳಿಕವೇ ರೌಟರ್ ಅಳವಡಿಸಲು ಸಾಧ್ಯ ಎಂದು ಯುನೈಟೆಡ್ ಟಿಲಿಕಾಂ ಲಿಮಿಟೆಡ್ ಸಂಸ್ಥೆ ಸಹಾಯಕ ಮಹದೇವ್ ಕನ್ನಡಪ್ರಭಕ್ಕೆ ತಿಳಿಸಿದರು.
ಸಮಸ್ಯೆಯಾಗಿಲ್ಲ: ಮಳೆ- ಸಿಡಿಲಿಗೆ ಸಾರಿಗೆ ಇಲಾಖೆ ಕಚೇರಿಯಲ್ಲಿದ್ದ ಕಂಪ್ಯೂಟರ್‌ಗಳು ಸುಟ್ಟು ಹೋಗಿತ್ತು. ಆದರೆ, ಅಧಿಕಾರಿಗಳ ಶ್ರಮದಿಂದ ತುರ್ತಾಗಿ ಕೆಲಸ ಮಾಡಿಸಿ, ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ ಎಂದು ರತ್ನಪುರಿರಾಜು, ಆರ್‌ಟಿಒ ಏಜೆಂಟ್ ಹೇಳುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement