ಗ್ರಾಪಂ ಕಚೇರಿಯಲ್ಲಿ ಕಂಪ್ಯೂಟರ್, ದಾಖಲೆ ಭಸ್ಮ
ಕ.ಪ್ರ.ವಾರ್ತೆ ಹುಣಸೂರು ಜೂ. 4
ಆಕಸ್ಮಿಕವಾಗಿ ಬೆಂಕಿ ತಗುಲಿ ಕಂಪ್ಯೂಟರ್ ಹಾಗೂ ಹಲವು ದಾಖಲೆಗಳು ಸುಟ್ಟು ಹೋಗಿರುವ ಘಟನೆ ತಾಲೂಕಿನ ಬೀಜಗನಹಳ್ಳಿ ಗ್ರಾಪಂ ಕಚೇರಿಯಲ್ಲಿ ಮಂಗಳವಾರ ನಡೆದಿದೆ.
ತಾಲೂಕಿನ ಬೀಜಗನಹಳ್ಳಿ ಗ್ರಾಮದಲ್ಲಿ ಬೆಳಗ್ಗೆ ಪಂಚಾಯಿತಿ ಬಿಲ್ ಕಲೆಕ್ಟರ್ ಶಿವಯ್ಯ ಬಾಗಿಲು ತೆಗೆದಾಗ ಕಂಪ್ಯೂಟರ್ ಮಾನಿಟರ್ ಹಾಗೂ ಮೇಜಿನ ಮೇಲಿದ್ದ ಹಲವಾರು ದಾಖಲೆಪತ್ರ ಸುಟ್ಟು ಹೋಗಿದ್ದನ್ನು ಗಮನಿಸಿದರು. ಕಚೇರಿಯ ಕಿಟಕಿ ಹಾಕಿದ್ದರಿಂದ ಹೊಗೆ ಹೊರಹೋಗಲು ಸಾಧ್ಯವಾಗದೇ ಕಚೇರಿ ಹೊಗೆಯಿಂದ ಕೂಡಿತ್ತು. ವಿಷಯ ತಿಳಿದ ಪಿಡಿಒ ನರಹರಿ, ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ಹಾಗೂ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.
ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಸ್‌ಐ ಅರುಣ್ ತನಿಖೆ ನಡೆಸುತ್ತಿದ್ದಾರೆ.