ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಹಿರಿದು'
ಕ.ಪ್ರ.ವಾರ್ತೆ ಮೈಸೂರು ಜೂ. 4
ದೇಶ ಕಟ್ಟುವ ಕೆಲಸದಲ್ಲಿ ಶಿಕ್ಷಕರ ಪಾತ್ರವೇ ಹಿರಿದು. ಅದು ಹೊಸ ಶತಮಾನ ಹಲವು ಸವಾಲುಗಳಿಂದ ಕೂಡಿದೆ ಎಂದು ಮೈಸೂರು ವಿವಿ ರಾಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಮಂಗಳೂರು ಯನಪೋಯಾ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಸೈಯದ್ ಅಖಿಲ್ ಅಹಮದ್ ಹೇಳಿದರು.
ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆ (ಡಯಟ್) ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಅಂಥ ಸವಾಲುಗಳಿಗೆ ಉತ್ತರ ಕಂಡುಕೊಳ್ಳಲು ಶಿಕ್ಷಕರೇ ಸ್ಪಷ್ಟವಾದ ಅಡಿಪಾಯ ಹಾಕಬೇಕು. ಹಿಂದೆಲ್ಲ ಯಾವುದೆ ವೃತ್ತಿಗೂ ತನ್ನದೆ ಆದ ಗೌರವ ಹಾಗೂ ಘನತೆ ಇತ್ತು. ಅದರಲ್ಲೂ ಶಿಕ್ಷಕರು ಎಂದರೆ ಅವರು ಸಮಾಜದ ಶಕ್ತಿ ಎನ್ನುವಂತಿತ್ತು.
ಈಗ ಚಿತ್ರಣ ಬದಲಾಗಿದೆ. ಎಲ್ಲ ವಲಯಗಳಂತೆ ಶೈಕ್ಷಣಿಕ ಕ್ಷೇತ್ರಗಳಲ್ಲೂ ಬದಲಾವಣೆಗಳಾಗಿವೆ. ಅದರಲ್ಲೂ ಶಿಕ್ಷಕರ ಘನತೆ ಕುಗ್ಗಿಸುವ ಬೆಳವಣಿಗೆಗಳು ನಡೆಯುತ್ತಿವೆ. ಇದನ್ನು ಹೋಗಲಾಡಿಸಿ ಹಿಂದಿನ ಹಿರಿಮೆ ಮರುಕಳಿಸುವ ಕೆಲಸ ಹೊಸ ತಲೆಮಾರಿನ ಶಿಕ್ಷಕರಿಂದ ಆಗಬೇಕು ಎಂದು ತಿಳಿಸಿದರು.
ದೇಶದಲ್ಲಿ ಅಮೆರಿಕ, ಕೆನಡಾ, ಜಪಾನ್‌ನಂಥ ಮುಂದುವರಿದ ದೇಶಗಳು ಭಾರತದತ್ತ ಗಮನ ಹರಿಸುತ್ತಿವೆ. ಅಭಿವೃದ್ಧಿ ಹೊಂದುತ್ತಿರುವ ಹಂತದಲ್ಲಿರುವ ಭಾರತದ ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲಕ್ಕೆ ಜಗತ್ತಿನಾದ್ಯಂತ ಎಲ್ಲಿಲ್ಲದ ಬೇಡಿಕೆ ಇದೆ. ಈ ಸಂಪನ್ಮೂಲವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳದೆ ಇದ್ದರೆ, ಭಾರತ ಭವಿಷ್ಯದಲ್ಲಿ ಏಕಾಂಗಿ ದೇಶವಾಗುವ ಆತಂಕವೂ ಇದೆ. ನಮ್ಮ ಸಾಮರ್ಥ್ಯ ಅರಿತು ಹೊಸ ಪೀಳಿಗೆಯನ್ನು ಉತ್ತೇಜಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಬಹುಮಾನ ವಿತರಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಬಿ.ಎನ್. ಶಿವರಾಮೇಗೌಡ ಮಾತನಾಡಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರು ಇದ್ದರು.