ಮಿನಿ ವಿಧಾನಸೌಧ ಕಟ್ಟಡಕ್ಕೆ 4.95 ಕೋಟಿ
ಕ.ಪ್ರ.ವಾರ್ತೆ ಟಿ.ನರಸೀಪುರ ಜೂ. 4
ಮಿನಿ ವಿಧಾನಸೌಧ ಕಟ್ಟಡದ ಮೊದಲ ಮಹಡಿ ಕಟ್ಟಡದ ನಿರ್ಮಾಣಕ್ಕೆ ಅಗತ್ಯವಿರುವ 4.95 ಕೋಟಿ ಅನುದಾನವನ್ನು ಯೋಜನೆಯಂತೆ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡಗಳ ದಕ್ಷಿಣ ವಿಭಾಗದ ಮುಖ್ಯ ಎಂಜಿನಿಯರ್ ಎ.ಎನ್. ತ್ಯಾಗರಾಜ್ ಹೇಳಿದರು.
ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಪ್ರಗತಿಯಲ್ಲಿರುವ ಮಿನಿ ವಿಧಾನಸೌಧ ಕಟ್ಟಡದ ಕಾಮಗಾರಿ ಪರಿಶೀಲಿಸಿ ಮಾತನಾಡಿ, ಈಗಾಗಲೇ ಮಿನಿ ವಿಧಾನಸೌಧದ ನೆಲ ಮಹಡಿ ಕಟ್ಟಡಕ್ಕೆ 3 ಕೋಟಿ ನೀಡಲಾಗಿತ್ತು. ಎರಡನೇ ಹಂತದಲ್ಲಿ ಮೊದಲ ಮಹಡಿ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ಯೋಜನೆಯಂತೆಯೆ 4.95 ಕೋಟಿ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಸ್ವಕ್ಷೇತ್ರವಾಗಿರುವುದರಿಂದ, ಕ್ಷೇತ್ರದಲ್ಲಿ ಸಂಪರ್ಕ ವ್ಯವಸ್ಥೆ ಸುಧಾರಣೆ ತರಬೇಕು ಮತ್ತು ಸರ್ಕಾರಿ ಕಟ್ಟಡಗಳ ನಿರ್ಮಾಣದ ಅಗತ್ಯತೆ ಪರಿಶೀಲಿಸಲು ತಾವಿಂದು ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದೇವೆ. ರಾಜ್ಯದಲ್ಲಿ ಯಾವುದೇ ಹೊಸ ಯೋಜನೆ ಕೈಗೆತ್ತಿಕೊಂಡಿಲ್ಲ. ಹಿಂದಿನ ಯೋಜನೆಗಳನ್ನು ಪೂರ್ಣಗೊಳಿಸಲಾಗುತ್ತಿದೆ. ನರಸೀಪುರ ಮಿನಿ ವಿಧಾಣಸೌಧ ಪೂರ್ಣಗೊಂಡ ನಂತರ ಕಂದಾಯ ಇಲಾಖೆಗೆ ವಹಿಸಲಾಗುತ್ತದೆ. ಬಾಕಿ ಉಳಿದುಕೊಂಡಿರುವ ರಸ್ತೆಗಳ ಕಾಮಗಾರಿಯನ್ನು ಸಧ್ಯದಲ್ಲಿಯೆ ಆರಂಭಿಸಲಾಗುವುದು ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯ ಪ್ರಧಾನ ವಾಸ್ತು ಶಿಲ್ಪಿ ಕೆ. ಉದಯ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎಚ್.ಎಂ. ಜನಾರ್ದನ್ ಮಾತನಾಡಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕೃಷ್ಣಮೂರ್ತಿ, ಸಹಾಯಕ ಎಂಜಿನಿಯರ್ಗಳಾದ ಕೆ.ಜೆ. ಶಿವಣ್ಣ, ಎಸ್.ಜಿ. ಶ್ರೀನಾಥ್, ಲತಾ, ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಎ. ಶಿವಕುಮಾರ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಸಿದ್ದಶೆಟ್ಟಿ, ಮುಖಂಡ ಉಕ್ಕಲಗೆರೆ ರಾಜು, ಎಂ.ಎಲ್. ಹುಂಡಿ ನಾಗರಾಜು, ಗಂಗಾಧರ, ಮರಿಸ್ವಾಮಿ ಇದ್ದರು.