ಸ್ವಚ್ಛತೆಯಿಂದ ಡೆಂಘೀಗೆ ತಡೆ: ಜಗದೀಶ್
ಕ.ಪ್ರ.ವಾರ್ತೆ ಮೈಸೂರು ಜೂ. 4
ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಮಾತ್ರ ಡೆಂಘೀ ರೋಗ ತಡೆಗಟ್ಟಬಹುದು ಎಂದು ಪಾಲಿಕೆ ಸದಸ್ಯ ಜೆ.ಎಸ್. ಜಗದೀಶ್ ಹೇಳಿದರು.
ತೊಣಚಿಕೊಪ್ಪಲು ಆರೋಗ್ಯ ಕೇಂದ್ರ ವತಿಯಿಂದ ವಸಂತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಡೆಂಘೀ ರೋಗ ಕುರಿತ ಆರೋಗ್ಯ ಜಾಥಾ ಉದ್ಘಾಟಿಸಿ ಮಾತನಾಡಿ, ಅನೇಕ ಭಾಗಗಲ್ಲಿ ಡೆಂಘೀ ಜ್ವರ ಹರಡುತ್ತಿದೆ. ಈ ರೋಗ ನಮ್ಮ ಬಡಾವಣೆಗೆ ಬರದಂತೆ ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ. ಅದಕ್ಕಾಗಿ ಪರಿಸರ ನೈರ್ಮಲ್ಯ ಕಾಪಾಡಬೇಕಿದೆ ಎಂದು ಹೇಳಿದರು.
ಡೆಂಘೀ ಮೈಸೂರು ಜಿಲ್ಲೆಯ ಅನೇಕ ಭಾಗಗಳಿಗೆ ಆವರಿಸಿದೆ. ಎಲ್ಲಿ ಈ ಮಹಾಮಾರಿ ಆವರಿಸಿದೆಯೋ ಅಲ್ಲಿ ವೈದ್ಯಾಧಿಕಾರಿಗಳು ಕ್ಯಾಂಪ್ ಮಾಡಿ ಅಲ್ಲಿ ಜನರು ಆರೋಗ್ಯ ತಪಾಸಣೆಗೆ ಮುಂದಾಗಬೇಕು ಎಂದು ತಿಳಿಸಿದರು.
ಜಾಥಾವು ವಸಂತನಗರದಿಂದ ಆರಂಭವಾಗಿ ಜನತಾನಗರ, ಶಾರದಾದೇವಿನಗರ, ತೊಣಚಿಕೊಪ್ಪಲಿನ ಮುಖ್ಯ ರಸ್ತೆಗಳಲ್ಲಿ ಸಾಗಿತು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಾಗಲಕ್ಷ್ಮೀ, ಸಹಾಯಕಿ ಪದ್ಮಾ, ಮುಖ್ಯ ಶಿಕ್ಷಕ ಗೋಪಾಲಯ್ಯ ಇದ್ದರು.