ಇಂದು ಡಿಸಿ, ಡಿಸಿಪಿ ಅಧಿಕಾರ ಸ್ವೀಕಾರ
ಕ.ಪ್ರ.ವಾರ್ತೆ , ಮೈಸೂರು , ಜೂ. 5
ಮೈಸೂರು ಜಿಲ್ಲಾಧಿಕಾರಿಯಾಗಿ ಡಾ. ರಾಮೇಗೌಡ ಹಾಗೂ ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಬಸವರಾಜ ವೈ. ಮಾಲಗತ್ತಿ ಅವರು ಗುರುವಾರ (ಜೂ. 6) ಅಧಿಕಾರ ಸ್ವೀಕರಿಸದ್ದಾರೆ.
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನ ಈ ಇಬ್ಬರು ಅಧಿಕಾರಿಗಳು ಬೇರೆಡೆಗೆ ವರ್ಗಾವಣೆಯಾಗಿದ್ದರು.
ಡಾ. ರಾಮೇಗೌಡ ಮತ್ತು ಬಸವರಾಜ ವೈ. ಮಾಲಗತ್ತಿ ಅವರು ಗುರುವಾರ ಬೆಳಗ್ಗೆ 10.30ಕ್ಕೆ ಅಧಿಕಾರ ವಹಿಸಿಕೊಳ್ಳುವರು.
ಡಾ. ರಾಮೇಗೌಡ ಅವರು ಫೆ. 1ರಂದು ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದ್ದರು. ಆದರೆ, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ. 27ರಂದು ಬೇರೆಡೆಗೆ ವರ್ಗಾವಣೆಯಾಗಿದ್ದರು. ಈಗ ಸಿಎಟಿಗೆ ಆದೇಶದಂತೆ ಮೈಸೂರು ಜಿಲ್ಲಾಧಿಕಾರಿಯಾಗಿ ವಾಪಸ್ ಬರುತ್ತಿದ್ದಾರೆ.
ಡಿಸಿಪಿ ಮಾಲಗತ್ತಿ: ಚುನಾವಣೆ ಹಿನ್ನೆಲೆಯಲ್ಲಿ ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿದ್ದ ಬಸವರಾಜ ವೈ. ಮಾಲಗತ್ತಿ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು. ಇವರ ಜಾಗಕ್ಕೆ ಶಾಂತನು ಸಿನ್ಹಾ ಅವರು ಏ. 4ರಂದು ಆಗಮಿಸಿದ್ದರು. ಚುನಾವಣೆಯ ನಂತರ ಶಾಂತನು ಸಿನ್ಹಾ ರಾಮನಗರಕ್ಕೆ ವರ್ಗಾವಣೆಯಾಗಿದ್ದರು. ಈಗ ತೆರವಾದ ಸ್ಥಾನಕ್ಕೆ ಬಸವರಾಜ ವೈ. ಮಾಲಗತ್ತಿ ಅವರು ವಾಪಸ್ ಬರುತ್ತಿದ್ದಾರೆ.