'ಉತ್ತಮ ಪರಿಸರ ನಿರ್ಮಾಣಕ್ಕೆ ಶ್ರಮಿಸಿ'
ಕ.ಪ್ರ.ವಾರ್ತೆ , ರಾವಂದೂರು , ಜೂ. 5
ಪರಿಸರ ಸಂರಕ್ಷಣೆಗೆ ಮಹಿಳೆಯರ ಪಾತ್ರ ಬಹಳ ಮುಖ್ಯವಾದದ್ದು, ತಮ್ಮ ಮನೆಯ ಸುತ್ತಮುತ್ತಲೂ ಉತ್ತಮ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಉಪ ಪ್ರಾಂಶುಪಾಲ ಎಂ.ಸಿ. ಪ್ರಶಾಂತ್ ಹೇಳಿದರು.
ಇಲ್ಲಿನ ಗ್ರಾಪಂ ಲೋಕಶಿಕ್ಷಣ ಕೇಂದ್ರದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಉಚಿತವಾಗಿ ಗಿಡ ವಿತರಿಸಿ ಮಾತನಾಡಿ, ತಾಲೂಕಿನಲ್ಲಿ ತಂಬಾಕು ಬೆಳೆಗಾಗಿ ಮರಗಳನ್ನು ನಾಶಪಡಿಸಲಾಗುತ್ತಿದೆ. ಆದ್ದರಿಂದ ಜನತೆ ಇನ್ನಾದರೂ ಎತ್ತೆಚ್ಚು ಮರ ಬೆಳೆಸುವತ್ತ ಗಮನ ಹರಿಸಬೇಕು. ಇದರಿಂದ ವಾತಾವರಣದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಚರ್ಚಾ ಮತ್ತು ಪ್ರಬಂಧ ಸ್ಪರ್ಧೆ ಏರ್ಪಡಿಸಿತ್ತು. ಚರ್ಚಾ ಸ್ಪರ್ಧೆಯಲ್ಲಿ ಗೀತಾ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಪಲ್ಲವಿ ಪ್ರಥಮ ಬಹುಮಾನ ಗಳಿಸಿದರು. ಭಾಗವಹಿಸಿದ್ದ ಪ್ರಶಿಕ್ಷಣಾರ್ಥಿಗಳಿಗೆ 30ಕ್ಕೂ ಹೆಚ್ಚು ವಿವಿಧ ಜಾತಿಗಳ ಗಿಡಗಳನ್ನು ವಿತರಿಸಲಾಯಿತು.
ಲೋಕಶಿಕ್ಷಣ ಕೇಂದ್ರ ಮೇಲ್ವಿಚಾರಕ ಮುಕುಂದ, ಕಲಿಕಾರ್ಥಿಗಳಾದ ಜೀವನ್, ಪಲ್ಲವಿ, ಗೀತಾ ಇದ್ದರು.