ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಉಸಿರೇ.. ಈ ಹಸಿರು ಕೊಲ್ಲಬೇಡ...

Vishwanath S
Updated On : 6 Jun 2013, 12:25 pm

ಕ.ಪ್ರ.ವಾರ್ತೆ ,   ಮೈಸೂರು ,   ಜೂ. 5
ಪರಿಸರ ದಿನವನ್ನು ಯಾವುದಾದರೂ ಒಂದು ದಿನ ಆಚರಿಸಿ ಸುಮ್ಮನಾಗುವುದಲ್ಲ. ಅದನ್ನು ಪ್ರತಿದಿನ ಆಚರಿಸಬೇಕು ಎಂದು ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಕೆ.ಎಂ. ಚಂದ್ರೇಗೌಡ ಹೇಳಿದರು.
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮವು ರಾಜ್ಯ ಸರ್ಕಾರ ಹಾಗೂ ಎಂಜಿನಿಯರುಗಳ ಸಂಸ್ಥೆಯ ಸಹಯೋಗದೊಂದಿಗೆ ಬುಧವಾರ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ಭರಾಟೆಯಲ್ಲಿ ಪರಿಸರ ನಮ್ಮಿಂದ ಕಳೆದು ಹೋಗುತ್ತಿದೆ. ವಿದ್ಯುತ್ ಸಂಪನ್ಮೂಲವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸೌರಶಕ್ತಿ ಬಳಕೆ ನಮ್ಮಲ್ಲಿ ಹೆಚ್ಚಾಗಬೇಕು. ಮಲೆನಾಡು ಪ್ರದೇಶದಲ್ಲಿ ಸೌರಶಕ್ತಿಯನ್ನು ಬಳಸಿಕೊಳ್ಳಲು ಕಷ್ಟವಾಗಬಹುದು. ಆದರೆ, ಈ ಭಾಗದ ಬಯಲು ಸೀಮೆಯಲ್ಲಿ ಸೌರಶಕ್ತಿ ಬಳಸಿಕೊಳ್ಳುವ ಅಗತ್ಯತೆ ಇದೆ. ಇದರಿಂದ ಮರ ಕಡಿಯುವುದು, ಇಂಧನವನ್ನು ಯಥೇಚ್ಛವಾಗಿ ಬಳಸುವುದು ತಪ್ಪುತ್ತದೆ. ಹವಾಮಾನ ವೈಪರೀತ್ಯವನ್ನು ಆದಷ್ಟು ತಡೆಗಟ್ಟಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಂಜಿನಿಯರುಗಳ ಸಂಸ್ಥೆಯ ಅಧ್ಯಕ್ಷ ಡಾ.ಟಿ. ಅನಂತಪದ್ಮನಾಭ ಮಾತನಾಡಿ, ಅಭಿವೃದ್ಧಿಯ ನೆಪದಲ್ಲಿ ಪರಿಸರ ಹಾಳು ಮಾಡುವ ಕೆಟ್ಟ ಮನೋಧರ್ಮಕ್ಕೆ ತಿಲಾಂಜಲಿ ಇಡಬೇಕು.
ಆರೋಗ್ಯ ಮತ್ತು ಆಹಾರದ ಕಡೆ ಗಮನಹರಿಸಬೇಕು. ಅದರಲ್ಲೂ ಶಾಲಾ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿದರೆ ಮುಂದಿನ ಪೀಳಿಗೆಗೆ ಜೈವಿಕ ವೈವಿಧ್ಯತೆ ಕಾಪಾಡಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕ ಭಾಷಣ ಮಾಡಿದ ಕೆಆರ್‌ಇಡಿಎಲ್ ಯೋಜನಾ ಎಂಜಿನಿಯರ್ ಡಿ.ಕೆ. ದಿನೇಶ್‌ಕುಮಾರ್, ವಿದ್ಯುತ್ ಕ್ಷೇತ್ರದಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮ ತಡೆಗಟ್ಟಲು ವಿದ್ಯುತ್ ಕೊರತೆ ನೀಗಿಸಲು ಪರಿಸರಸ್ನೇಹಿಯಾದ ಅಸಂಪ್ರದಾಯಕ ಶಕ್ತಿ ಮೂಲಗಳ ವಿದ್ಯುತ್ ಬಳಕೆ ಇಂದಿನ ದಿನಗಳಲ್ಲಿ ಅವಶ್ಯಕತೆ ಇದೆ. ಮೈಸೂರನ್ನು ಸೋಲಾರ್ ನಗರವನ್ನಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಪಾಲಿಕೆಯ 7 ವಲಯ ಕಚೇರಿ ವ್ಯಾಪ್ತಿಯಲ್ಲಿ 60 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಕೇಂದ್ರ ಸರ್ಕಾರ ಶೇ. 30 ರಷ್ಟು ಸಹಾಯಧನ ಬಿಡುಗಡೆ ಮಾಡಿದೆ. ಕುಪ್ಪಣ್ಣ ಹಾಗೂ ಚೆಲುವಾಂಬ ಉದ್ಯಾನವನದಲ್ಲಿ ತಲಾ 9 ಕಿಲೋ ವ್ಯಾಟ್ ಸೋಲಾರ್ ವಿದ್ಯುತ್ ಸ್ಥಾವರ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ವ್ಯಾಪ್ತಿಯ 155 ನೆಮ್ಮದಿ ಕೇಂದ್ರಗಳಲ್ಲಿ 2 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ವಿದ್ಯುತ್ ಸ್ಥಾವರ ಅಳವಡಿಸಿ ಕಂಪ್ಯೂಟರ್, ಪ್ರಿಂಟರ್‌ಗಳಿಗೆ ವಿದ್ಯುತ್ ನೀಡಲಾಗುತ್ತಿದೆ. ಇದರ ಯಶಸ್ಸನ್ನು ಗಮನಿಸಿ ಮಂಡ್ಯದ ಎಂಡಿಸಿಸಿ ಬ್ಯಾಂಕ್‌ನವರು 14 ವಿಭಾಗೀಯ ಕಚೇರಿಗಳಲ್ಲಿ ಸೋಲಾರ್ ವಿದ್ಯುತ್ ಸ್ಥಾವರ ಅಳವಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಎಂಜಿನಿಯರುಗಳ ಸಂಸ್ಥೆಯ ಮಾಜಿ ಅಧ್ಯಕ್ಷ ಎ.ಎಸ್. ಸತೀಶ್, ಗೌರವ ಕಾರ್ಯದರ್ಶಿ ಟಿ.ಆರ್. ಸತ್ಯನಾರಾಯಣ ಇದ್ದರು. ಸಂಸ್ಥೆಯ ಆವರಣದಲ್ಲಿ ವಿದ್ಯುತ್ ಉಳಿತಾಯದ ಬಗ್ಗೆ ಛಾಯಾಚಿತ್ರ ಪ್ರದರ್ಶನ, ಸೋಲಾರ್ ಉಪಕರಣಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಪರಿಸರ ಸಂರಕ್ಷಣೆಗೆ ಕೈಜೋಡಿಸಿ: ಸಿಎಚ್‌ವಿ
ಪ್ರತಿಯೊಬ್ಬರು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಕರೆ ನೀಡಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿ, ದಿನದಿಂದ ದಿನಕ್ಕೆ ಪರಿಸರ ಹಾಳಾಗುತ್ತಿದ್ದು, ಸಂರಕ್ಷಿಸುವ ಅನಿವಾರ್ಯತೆ ನಮಗೆ ಎದುರಾಗಿದೆ ಎಂದರು.ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾದ ಜಾಥಾಗೆ ನಗರ ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್ ಚಾಲನೆ ನೀಡಿದರು. ಜಾಥಾದಲ್ಲಿ ಪಾಲ್ಗೊಂಡ ಸಾವಿರಾರು ಮಹಿಳೆಯರು ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಮರಗಳ ಮಾರಣಹೋಮ ನಿಲ್ಲಲಿ ಎಂಬ ಘೋಷಣೆ ಸೇರಿದಂತೆ ಪರಿಸರ ಸಂರಕ್ಷಣೆ ಕುರಿತಂತೆ ಅರಿವು ಮೂಡಿಸುವ ನೂರಾರು ಘೋಷಣಾ ಫಲಕ ಹಿಡಿದು ಹೆಜ್ಜೆ ಹಾಕಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ಹುಚ್ಚಯ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ನಿರ್ದೇಶಕ ಎ. ಶ್ರೀಹರಿ, ಪಾಲಿಕೆ ಸದಸ್ಯ ಪಿ. ಪ್ರಶಾಂತ್‌ಗೌಡ, ಮಹಾಬಲ ಕುಲಾಲ್, ಚೇತನಾ ಇದ್ದರು.
ಪ್ರಕೃತಿ ಸ್ನೇಹಿತರಾಗಲಿ
ಮೈಸೂರು: ಭೂಮಿಯ ಮೇಲಿರುವ ಪ್ರಾಣಿ ಪಕ್ಷಿಗಳಿಗೂ ಪರಿಸರದ ಮೇಲೆ ಹಕ್ಕಿದೆ ಎಂಬುದನ್ನು ಅರಿತು ಅವುಗಳಿಗೆ ಬದುಕಲು ಅವಕಾಶ ಕಲ್ಪಿಸಬೇಕು. ಪ್ರತಿಯೊಬ್ಬರು ಪ್ರಕೃತಿಗೆ ಸ್ನೇಹಿತರಾಗಬೇಕು ಎಂದು ಪರಿಸರ ತಜ್ಞ ಕಾರ್ಟ್ ರವಿಕುಮಾರ್ ಕರೆ ನೀಡಿದರು. ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ ಸಂಸ್ಥೆಯು ತ್ರಿವೇಣಿ ವೃತ್ತದ ಸಮೀಪದ ಕಲ್ಯಾಣಗಿರಿಯಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದ್ದು, ಭೂಮಾಲಿನ್ಯಕ್ಕೆ ನಾವೇ ನೇರವಾಗಿ ಕಾರಣವಾಗುತ್ತಿದ್ದೇವೆ. ಮರ ಗಿಡಗಳ ನಾಶದಿಂದ ನಗರೀಕರಣವಾಗಿ ಕಾಡು ಪ್ರಾಣಿಗಳು ನಗರಗಳತ್ತ ಮುಖ ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಇದೇ ವೇಳೆ 250 ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ಕಲ್ಯಾಣಗಿರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ 20ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಮಕ್ಕಳಿಂದಲೇ ನಾಮಕರಣ ಮಾಡಿಸಲಾಯಿತು. ಆರ್‌ಎಲ್‌ಎಚ್‌ಪಿ ಸಂಸ್ಥೆಯ ನಿರ್ದೇಶಕಿ ಸರಸ್ವತಿ ಪ್ರಾಸ್ತಾವಿಕ ಭಾಷಣ ಮಾಡಿದರು. ಶಿಕ್ಷಕ ಶ್ರೀನಿವಾಸ್, ಪ್ರೇಮಲತಾ, ದೇವರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement