ಕಾಡಿದ್ದರೆ ಮಳೆ, ಮಳೆ ಬಿದ್ದರೆ ಬೆಳೆ ...
ಕ.ಪ್ರ.ವಾರ್ತೆ , ಮೈಸೂರು , ಜೂ. 5
ಪರಿಸರ ಸಂರಕ್ಷಣೆಯಿಂದ ಮಾತ್ರ ನಮ್ಮ ಉಳಿವು. ಮಾನವನು ಪರಿಸರ ನಾಶ ಮಾಡದೆ ರಚನಾತ್ಮಕವಾಗಿ ಬಳಸಬೇಕು ಎಂದು ಮಕ್ಕಳ ತಜ್ಞ ಡಾ.ಎಲ್. ಅಮರನಾಥ್ ಹೇಳಿದರು.
ಸರಸ್ವತಿಪುರಂನಲ್ಲಿರುವ ವಿಜಯ ವಿಠ್ಠಲ ಸಂಯುಕ್ತ ಪಿಯು ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಮಾನವನು ಪ್ರಕೃತಿನಿಷ್ಠನಾಗಿರಬೇಕು. ಪ್ಲಾಸ್ಟಿಕ್ನಿಂದ ಪರಿಸರಕ್ಕೆ ಆಗುತ್ತಿರುವ ಹಾನಿ ಮತ್ತು ಅಪಾಯದ ಮುನ್ಸೂಚನೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಮಾತನಾಡಿ, ಅತ್ಯಮೂಲ್ಯವಾದ ಅರಣ್ಯ ಸಂಪತ್ತು, ಪ್ರಾಣಿ ಸಂಕುಲ, ಖನಿಜ ಸಂಪತ್ತುಗಳೆಲ್ಲ ಕ್ಷೀಣಿಸುತ್ತಿವೆ. ಜಲಮಾಲಿನ್ಯ, ವಾಯು ಮಾಲಿನ್ಯ ಅಧಿಕವಾಗಿದೆ. ನಮ್ಮ ಸುತ್ತಲಿನ ಪರಿಸರ ಚೆನ್ನಾಗಿದ್ದರೆ ಮಾತ್ರ ನಾವು ಸುಖಕರವಾಗಿರುತ್ತೇವೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮನೆಯ, ಶಾಲೆಯ, ಕಚೇರಿಯ ಸುತ್ತಮುತ್ತಲ ವಾತಾವರಣ ಶುಚಿಯಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಪಿ.ಎನ್. ಸಂಗೀತಾ, ಸಿ. ರಶ್ಮೀ ಇದ್ದರು. ವೈಷ್ಣವಿ ಪ್ರಾರ್ಥಿಸಿದರು. ಅಕ್ಷತಾ ಸ್ವಾಗತಿಸಿದರು. ಸುಹಾಸ್ ವಂದಿಸಿದರು. ಶಿವಾನಿ ಕಾಮತ್ ನಿರೂಪಿಸಿದರು.
ಶಾಂತಿನಗರದಲ್ಲಿ ಜಾಗೃತಿ ಜಾಥಾ
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಷನ್ ವತಿಯಿಂದ ಶಾಂತಿನಗರ, ಮೇದರ್ಸ್ ಬ್ಲಾಕ್, ನಾಚೇನಹಳ್ಳಿ ಪಾಳ್ಯ, ಅಲೀಂನಗರ ಹಾಗೂ ಮೇಟಗಳ್ಳಿಯ ಸರ್ಕಾರಿ ಶಾಲೆಗಳ ಸಹಯೋಗದೊಂದಿಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಜಾಗೃತಿ ಜಾಥಾದಲ್ಲಿ ನೂರಾರು ಮಕ್ಕಳು, ಮುಖ್ಯೋಪಾಧ್ಯಾಯರು, ಮಹಿಳಾ ಸಂಘಟನೆಗಳು ಭಾಗವಹಿಸಿದ್ದರು. ಬಡಾವಣೆಗಳ ವಿವಿಧ ರಸ್ತೆಗಳಲ್ಲಿ ತೆರಳಿ ಮರಗಿಡ ಬೆಳೆಸಿ, ಪರಿಸರ ಉಳಿಸಿ, ಪರಿಸರ ಸಂರಕ್ಷಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಜಿಲ್ಲಾ ವ್ಯವಸ್ಥಾಪಕ ವೆಂಕಟೇಶ್, ಮುಖ್ಯೋಪಾಧ್ಯಾಯ ಮಹದೇವ್, ಸಿಬ್ಬಂದಿ ಶ್ರೀನಿವಾಸ್, ರಾಜಲಕ್ಷ್ಮೀ ಸೈಯದ್ ನಾಸಿರಾ, ನೂರ್ ಜಾಕಿಯಾ, ಶಹಬಾಝ್ ಪಾಷಾ, ದಸ್ತಗೀರ್ ಇದ್ದರು.
'ರೋಲ್ಕಾಲ್ ಸಂಸ್ಕೃತಿ ಸೃಷ್ಟಿ'
ಮಾನವ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ರೋಲ್ಕಾಲ್ ಸಂಸ್ಕೃತಿ ಸೃಷ್ಟಿಸಿದ್ದಾನೆ ಎಂದು ಇಸ್ರೋ ಪರಿಸರ ವಿಜ್ಞಾನಿ ಪ್ರೊ. ವಿ. ಜಗನ್ನಾಥ್ ಕಿಡಿಕಾರಿದರು. ನಟರಾಜ ಪಿಯು ಕಾಲೇಜಿನಲ್ಲಿ ಬುಧವಾರ ಮೇದಿನ ಇಕೋ ಕ್ಲಬ್ ಉದ್ಘಾಟಿಸಿ ಮಾತನಾಡಿ, ಪ್ರಕೃತಿಯಲ್ಲಿ ಎಲ್ಲಾ ವಸ್ತುಗಳಿಗೆ ತನ್ನದೇ ಆದ ಬೆಲೆ ಇದೆ. ಪ್ರಕೃತಿಯಲ್ಲಿ ವ್ಯರ್ಥವಾದ ವಸ್ತುವಿಲ್ಲ. ವ್ಯರ್ಥವಾದ ವಸ್ತುವಿರುವುದು ಮನುಷ್ಯನ ತಲೆಯಲ್ಲಿ ಎಂದರು. ಪರಿಸರದ ಜತೆ ಮನುಷ್ಯ ಹೇಗೆ ವರ್ತಿಸುತ್ತಾನೆ. ಹಾಗೆ ಪರಿಸರ ನಮ್ಮ ಜೊತೆ ವರ್ತಿಸುತ್ತದೆ. ಪರಿಸರ ಏಕಮುಖವಾಗಿ ವರ್ತಿಸುವುದಿಲ್ಲ. ಪರಿಸರದ ಮೇಲೆ ನಿರಂತರ ದೌರ್ಜನ್ಯವನ್ನು ನಾವು ಮಾಡುತ್ತಾ ಬಂದ ಪರಿಣಾಮ ಪರಿಸರ ಮುನಿದು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದೆ. ಆದ್ದರಿಂದ ಇಂದಿನ ಪೀಳಿಗೆ ತಿಳಿದು ಕೊಳ್ಳುವುದಕ್ಕಿಂತ ಮಾಡುವುದು ದೊಡ್ಡದು ಎಂದು ಅಭಿಪ್ರಾಯಪಟ್ಟರು. ನಟರಾಜ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಎಂ. ಶಾರದಾ ಅಧ್ಯಕ್ಷತೆ ವಹಿಸಿದ್ದರು. ನಟರಾಜ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ. ಪ್ರಸಾದಮೂರ್ತಿ ಅತಿಥಿಯಾಗಿ ಇದ್ದರು.
ಜೆಎಸ್ಎಸ್ ಶಾಲೆ: ಪರಿಸರ ದಿನ
ಲಕ್ಷ್ಮೀಪುರಂನಲ್ಲಿರುವ ಜೆಎಸ್ಎಸ್ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಅತಿಥಿಯಾಗಿ ಆಗಮಿಸಿದ್ದ ವಲಯ ಅರಣ್ಯಾಧಿಕಾರಿ ಜಿ.ಎಂ. ಸೋಮಪ್ಪ ಸಸಿ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ತೋಟಗಾರಿಕೆ ಉಪನಿರ್ದೇಶಕ ಎಚ್.ಎಂ. ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಎಸ್.ಸಿ. ಚೆನ್ನಬಸಪ್ಪ ಇದ್ದರು. ಎನ್.ಎಸ್. ವೀರೇಶ್ ವಂದಿಸಿದರು.
ಜೈವಿಕ ಇಂಧನ ಸಸಿ ವಿತರಣೆ
ಜಿಪಂ, ಎನ್ಐಇ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ ಮತ್ತು ಡೀಡ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಪಿ.ಎ. ಗೋಪಾಲ್ ಮಕ್ಕಳಿಗೆ ಜೈವಿಕ ಇಂಧನ ಸಸಿ ವಿತರಿಸಿದರು.
ನಂತರ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರದ ನಿರ್ದೇಶಕ ಪ್ರೊ. ಶಾಮ್ಸುಂದರ್ ಹೊಂಗೆ ಬೀಜದಿಂದ ತಯಾರಿಸಿರುವ ಬಯೋ ಡೀಸೆಲ್ ಅನ್ನು ಮಕ್ಕಳಿಗೆ ತೋರಿಸಿ ಪರಿಷ್ಕರಣೆಯ ವಿಧಾನ ತಿಳಿಸಿಕೊಟ್ಟರು. ಎನ್ಐಇ ಪ್ರಾಂಶುಪಾಲ ಡಾ.ಜಿ.ಎಲ್. ಶೇಖರ್, ಬಸ್ಸಿಲಾಲ್, ಪಿಆರ್ಒ ಶಿವರುದ್ರಪ್ಪ, ಜೈವಿಕ ಇಂಧನ ಸಹ ನಿರ್ದೇಶಕ ಎಸ್. ಮುರ್ತುಜಾ ಆಲಿ, ಡೀಡ್ ಸಂಸ್ಥೆಯ ಜಿ.ಎಸ್. ಜಗದೀಶ್, ಎಪಿಒ ರಾಜಶೇಖರ್ ಎಂ. ಜವಳಗಿ ಇದ್ದರು.
ಕೆನರಾ ಬ್ಯಾಂಕ್ನಿಂದ ಸಸಿ ವಿತರಣೆ
ಕೆನರಾ ಬ್ಯಾಂಕ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ವಿತರಿಸಲಾಯಿತು. ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಆಶುಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಶಾಖೆಯ ಉಪ ಮಹಾಪ್ರಬಂಧಕ ಡಾ.ಎಸ್.ಟಿ. ರಾಮಚಂದ್ರ, ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎಚ್. ಸುರೇಶ್ ಅತಿಥಿಯಾಗಿ ಭಾಗವಹಿಸಿದ್ದರು.
ನವ್ಕೀಸ್ ಶಾಲೆಯಲ್ಲಿ ಪರಿಸರ ದಿನ
ನಗರದ ನವ್ಕೀಸ್ ಶಾಲಾ ಆವರಣದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆಯನ್ನು ಸಸಿಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪ್ರಾಂಶುಪಾಲೆ ವಸಂತಲತಾ ಅವರ ನೇತೃತ್ವದಲ್ಲಿ ಶಿಕ್ಷಕರು, ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ವಸಂತ ಲತಾ ಅವರು ಮಾತನಾಡಿ, ನೆಲ, ಜಲ, ಪ್ರಕೃತಿ ಮತ್ತು ಮಾನವ ಸಂಪತ್ತನ್ನು ಮುಂದಿನ ಪೀಳಿಗೆಗೂ ಉಳಿಸಿ, ಬೆಳೆಸಬೇಕಾದ ಮಹತ್ವದ ಬಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ಪ್ರದೂಷಣೆಯಿಂದ ಆಗುವ ಹಾನಿ ಎಂಬ ಕಿರು ನಾಟಕ ಅಭಿನಯಿಸಿದರು.