'ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಿ'
ಕ.ಪ್ರ.ವಾರ್ತೆ , ಮೈಸೂರು , ಜೂ. 5
ವಿದ್ಯಾರ್ಥಿಗಳು ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಮಹಾರಾಜ ಕಾಲೇಜು ಪ್ರಾಂಶುಪಾಲೆ ಪ್ರೊ. ಸ.ನ. ಗಾಯತ್ರಿ ಹೇಳಿದರು.
ಮಹಾರಾಜ ಕಾಲೇಜು ಸ್ನಾತಕ ಗ್ರಂಥಾಲಯವು ಬುಧವಾರ ಆಯೋಜಿಸಿದ್ದ ಪುಸ್ತಕಗಳ ಉಪಯೋಗಕ್ಕಾಗಿ ಎಂಬ ಪುಸ್ತಕ ಪ್ರದರ್ಶನದಲ್ಲಿ ಮಾತನಾಡಿ, ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಕಡಿಮೆ ಆಗಿದೆ ಎಂದರು.
ಗ್ರಂಥಾಲಯ ವಿಜ್ಞಾನವೂ ಕಲೆ ಮತ್ತು ಕೌಶಲ. ಗ್ರಂಥಾಲಯವು ವಿಜ್ಞಾನದ ಜೊತೆಗೆ ಕೌಶಲ, ಕಲೆ ಹೊಂದಿದೆ. ಈ ಗ್ರಂಥಾಲಯವು ತುಂಬಾ ಹಳೆಯದಾಗಿದ್ದು, ಇಲ್ಲಿ ಮಹನೀಯರು ಓದಿದ್ದಾರೆ, ಮೌಲ್ಯಯುತ ಪುಸ್ತಕಗಳಿವೆ. ಜ್ಞಾನ ಹೆಚ್ಚಿಸಿಕೊಳ್ಳಲು ಹಳೆಯದರ ಜೊತೆಗೆ ಈಗಿನ ಪುಸ್ತಕಗಳನ್ನು ಓದಬೇಕಿದೆ ಎಂದು ತಿಳಿಸಿದರು.
ಮಾನಸಗಂಗೋತ್ರಿಯಲ್ಲಿರುವ ಮೈಸೂರು ವಿವಿ ಗ್ರಂಥಾಲಯದ ಉಪ ಗ್ರಂಥಪಾಲಕ ಡಾ.ಪಿ. ಸರಸ್ವತಿ ಮಾತನಾಡಿ, ಇಂಟರ್ನೆಟ್, ಬ್ಲಾಗ್ ಯುಗದಲ್ಲೂ ಸಹ ಗ್ರಂಥಾಲಯದ ಸಂಸ್ಕೃತಿ ಮುಂದುವರಿದಿದೆ ಎಂದರು.
ಸ್ನಾತಕ ಗ್ರಂಥಾಲಯದ ಉಪ ಗ್ರಂಥಪಾಲಕ ಆರ್.ಕೆ. ಸೋಮಶೇಖರ್ ಮಾತನಾಡಿ, ಈ ಸಾಲಿನಲ್ಲಿ 6.50 ಲಕ್ಷ ಪುಸ್ತಕಗಳನ್ನು ಹೊಸದಾಗಿ ಖರೀದಿಸಲಾಗಿದ್ದು, ವಿದ್ಯಾರ್ಥಿಗಳ ಗಮನಕ್ಕಾಗಿ ಪ್ರದರ್ಶಿಸಲಾಗಿದೆ ಎಂದು ಹೇಳಿದರು.
ವಿಶ್ವವಿದ್ಯಾನಿಲಯ ಸಂಜೆ ಕಾಲೇಜು ಪ್ರಾಂಶುಪಾಲ ಪ್ರೊ. ರಾಮನಾರಾಯಣ, ಗ್ರಂಥಾಲಯ ಸಲಹೆಗಾರ ಪ್ರೊ. ಐ.ಆರ್.ಎನ್. ಗೌಡರ್, ಯುವರಾಜ ಕಾಲೇಜು ಆಡಳಿತಾಧಿಕಾರಿ ಡಾ. ಮಹಜಬೀನ್ ಇದ್ದರು.