ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಸಕಾಲ'ದಲ್ಲಿ ಪರಿಣಾಮಕಾರಿಯಾಗದ ಜಾರಿ

Vishwanath S
Updated On : 6 Jun 2013, 12:18 pm

ಕ.ಪ್ರ.ವಾರ್ತೆ ,   ಮೈಸೂರು ,   ಜೂ. 5
ಮೂರು ಹಂತದ ಪಂಚಾಯತ್ ವ್ಯವಸ್ಥೆಯಾದ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದ ಕಚೇರಿಗಳಲ್ಲಿ ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011 ಪರಿಣಾಮಕಾರಿಯಾಗಿ ಹಾಗೂ ಕ್ರಮಬದ್ಧವಾಗಿ ಜಾರಿಯಾಗುತ್ತಿಲ್ಲ.
ಸಕಾಲ ಸೇವೆಗಳಲ್ಲಿ ಬರುವ ಎಲ್ಲಾ ಅರ್ಜಿಗಳನ್ನು ನೋಂದಣಿ ಮಾಡಿ, ಸಕಾಲ ಸಂಖ್ಯೆ ನೀಡದಿರುವುದು, ಅರ್ಜಿಗಳನ್ನು ನೀಡಿರುವ ಕಾಲಾವಕಾಶದೊಳಗೆ ವಿಲೇವಾರಿ ಮಾಡದಿರುವುದು ಮತ್ತು ಕೆಲವು ಜಿಪಂಗಳು, ಗ್ರಾಪಂಗಳು ಸಕಾಲ ಸೇವೆಯಡಿ ಅರ್ಜಿ ಸ್ವೀಕರಿಸದಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಹೇಳಿದ್ದಾರೆ.
ನಿರ್ದೇಶನ: ರಾಜ್ಯದ 5,627 ಗ್ರಾಪಂಗಳಲ್ಲಿ 2012ರ ಏ. 2 ರಿಂದ ಸಕಾಲ ಸೇವೆ ಜಾರಿಗೊಳಿಸಲಾಗಿದ್ದು, ಸದರಿ ಸೇವೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ 11 ಸೇವೆಗಳನ್ನು ಒದಗಿಸುವಂತೆ ಮತ್ತು ಸದರಿ ಸೇವೆಯನ್ನು ಪರಿಣಾಮಕಾರಿಯಾಗಿ ಹಾಗೂ ಕ್ರಮಬದ್ಧವಾಗಿ ಜಾರಿಗೊಳಿಸುವ ಬಗ್ಗೆ ಸರ್ಕಾರ ಹಲವಾರು ಸುತ್ತೋಲೆಗಳ ಮೂಲಕ ನಿರ್ದೇಶನ ನೀಡಲಾಗಿದೆ.
ಜವಾಬ್ದಾರಿ: ಸಕಾಲದಡಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಗುರುತಿಸಿರುವ ಸೇವೆಗಳನ್ನು ಗ್ರಾಮ ಪಂಚಾಯಿತಿಗಳು ನಿಗದಿತ ಕಾಲಮಿತಿಯಲ್ಲಿ ಒದಗಿಸುತ್ತಿರುವ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಉಸ್ತುವಾರಿ ನಡೆಸಬೇಕು. ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿರುವ ಬಗ್ಗೆ ಜಿಪಂ ಉಪ ಕಾರ್ಯದರ್ಶಿ ಉಸ್ತುವಾರಿ ನಡೆಸಬೇಕು. ಗ್ರಾಮೀಣ ಅಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆಗೆ ಸಂಬಂಧಿಸಿದಂತೆ ಸಕಾಲ ಸೇವೆ ಬಗ್ಗೆ ಸಮಗ್ರ ಮೇಲುಸ್ತುವಾರಿ ನಡೆಸುವುದು. ಮತ್ತು ಯಶಸ್ವಿ ಅನುಷ್ಠಾನಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಸಂಪೂರ್ಣ ಜವಾಬ್ದಾರರನ್ನಾಗಿ ಮಾಡಲಾಗಿದೆ.
ಅನುಷ್ಠಾನದಲ್ಲಿ ಲೋಪ: ಸಕಾಲ ಸೇವೆ ಬಗ್ಗೆ ನಾಮಫಲಕ ಅಳವಡಿಸದೆ ಇರುವುದು, ತಾಂತ್ರಿಕ ಸಮಸ್ಯೆಗಳಿಂದ ಸೇವೆ ನೀಡದೆ ಇರುವುದು, ಅಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿ ಕಾರ್ಯಚಟುವಟಿಕೆಗಳ ಬಗ್ಗೆ ಸೂಕ್ತ ಮೇಲ್ವಿಚಾರಣೆ ಮಾಡದೆ ಇರುವುದು ಕಂಡು ಬಂದಿದೆ ಎಂದು ರಶ್ಮಿ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟದ ಹಾಗೂ ಗ್ರಾಮ ಮಟ್ಟದ ಕಚೇರಿಗಳಲ್ಲಿ ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011ಅನ್ನು ಪರಿಣಾಮಕಾರಿಯಾಗಿ ಹಾಗೂ ಕ್ರಮಬದ್ಧವಾಗಿ ಜಾರಿಗೊಳಿಸಲು ಈ ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011ರ ಕಲಂ 5(1) ರಂತೆ ಸಲ್ಲಿಕೆಯಾಗುವ ಪ್ರತಿಯೊಂದು ಅರ್ಜಿಗೂ 15 ಅಂಕಿಗಳ ಸ್ವೀಕೃತಿ ಪತ್ರವನ್ನು ಕಡ್ಡಾಯವಾಗಿ ಅರ್ಜಿದಾರರಿಗೆ ನೀಡಬೇಕು. ನಿಗದಿಪಡಿಸಿರುವ ಅವಧಿಯೊಳಗೆ ಗ್ರಾಮ ಪಂಚಾಯಿತಿಯು ಸಕಾಲ ಅಧಿನಿಯಮದಡಿ ಸೇವೆ ಒದಗಿಸಬೇಕು. ಸಕಾಲ ಸೇವೆಯಡಿ ಗ್ರಾಮ ಪಂಚಾಯಿತಿಯು ಅರ್ಜಿದಾರರಿಂದ ಅರ್ಜಿ ಸ್ವೀಕರಿಸಬೇಕು. ಯಾವುದೇ ಕಾರಣಕ್ಕೂ ದಲ್ಲಾಳಿಗಳಿಂದ ಹತ್ತಾರು ಅರ್ಜಿಗಳನ್ನು ಒಟ್ಟಾಗಿ ಪಡೆಯಬಾರದು. ಎಲ್ಲ ಗ್ರಾಮ ಪಂಚಾಯಿತಿಗಳು ಸಕಾಲ ಸೇವೆಯಿಂದ ಸೇವೆ ಒದಗಿಸಬೇಕು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕಡ್ಡಾಯವಾಗಿ ಸಕಾಲ ಯಶಸ್ವಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರತಿ ತಿಂಗಳು ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ (ಅಭಿವೃದ್ಧಿ), ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿ ಸಭೆಯ ನಡವಳಿಯನ್ನು ಸಕಾಲ ಮಂಡಳಿಗೆ ಕಳುಹಿಸಬೇಕು ಎಂದು ಆದೇಶಿದ್ದಾರೆ.
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 232 ರಂತೆ ತಾಲೂಕು ಪಂಚಾಯಿತಿಯ ಸಂಬಂಧದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಮತ್ತು ಗ್ರಾಮ ಪಂಚಾಯಿತಿ ಸಂಬಂಧದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯು ಪರಿವೀಕ್ಷಣೆ ಮತ್ತು ಮೇಲ್ವಿಚಾರಣೆ ಮಾಡುವಂತೆ ಸೂಚಿಸಿದ್ದಾರೆ.
ಸಕಾಲದಲ್ಲಿ ಸಭೆ ನಡೆಸಿ
ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳು ಶಾಸನಬದ್ಧ ಸಭೆಗಳನ್ನು ನಿಯಮಿತ ಕಾಲದಲ್ಲಿ ನಡೆಸಬೇಕು ಎಂದು ತಿಳಿಸಿದ್ದಾರೆ. 2013- 14ನೇ ಸಾಲಿನಲ್ಲಿ ಕಾಮಗಾರಿವಾರು ಸಮಗ್ರ ವಾರ್ಷಿಕ ಕ್ರಿಯಾಯೋಜನೆ ಮತ್ತು ಆಯವ್ಯಯ ಅನುಮೋದನೆಗಾಗಿ ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸುವಂತೆಯೂ ನಿರ್ದೇಶನ ನೀಡಿದ್ದಾರೆ. 2013- 14ನೇ ಸಾಲಿನ ಗ್ರಾಮ ಪಂಚಾಯಿತಿಗಳ ಕ್ರೋಡೀಕೃತ ಕಾಮಗಾರಿವಾರು ಕ್ರಿಯಾಯೋಜನೆಯನ್ನು ಸಿದ್ಧಪಡಿಸುವುದು ಮತ್ತು 23 ಇಲಾಖೆಗಳ ಎಲ್ಲ ವಿಷಯಗಳನ್ನೊಳಗೊಂಡಂತೆ ಜಿಪಂ ಹಾಗೂ ತಾಪಂ ಕಾಮಗಾರಿವಾರು ಕ್ರಿಯಾಯೋಜನೆ ಸಿದ್ದಪಡಿಸುವಂತೆ ತಿಳಿಸಿದ್ದಾರೆ.
ಪಿಡಿಒಗಳ ಸಭೆ ನಡೆಸಿ: ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತ್ರೈಮಾಸಿಕವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ಪ್ರಗತಿ ಪರಿಶೀಲನೆ, ಮಾಹಿತಿ, ತಿಳಿವಳಿಕೆ, ಕೆಳಸ್ತರದ ಎಲ್ಲ ಅಧಿಕಾರಿಗಳಿಗೆ ಮನೋಸ್ಥೈರ್ಯ ತುಂಬುವಂತೆ ಸಲಹೆ ಮಾಡಿದ್ದಾರೆ.

-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement