ಸಮಸ್ಯೆಗಳ ಸುಳಿಯಲ್ಲಿ ಗ್ರಂಥಾಲಯ
ಕ.ಪ್ರ.ವಾರ್ತೆ , ಮೈಸೂರು , ಜೂ. 5
ನಗರದ ಸರಸ್ವತಿಪುರಂ ಮತ್ತು ಕುವೆಂಪುನಗರ ಶಾಖಾ ಗ್ರಂಥಾಲಯಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿವೆ.
ಸರಸ್ವತಿಪುರಂ 1ನೇ ಮುಖ್ಯರಸ್ತೆಯಲ್ಲಿನ ತೆಂಗಿನತೋಪು ಉದ್ಯಾನವನದಲ್ಲಿ ಶಾಖಾ ಗ್ರಂಥಾಲಯ ಇದೆ. ತೀರಾ ಹಳೆಯದಾದ ಈ ಗ್ರಂಥಾಲಯದ ಗೋಡೆ ಬಿರುಕು ಬಿಟ್ಟಿದ್ದು, ಈ ಬಾರಿಯ ಮುಂಗಾರಿನ ಆರ್ಭಟಕ್ಕೆ ನೆಲಕಚ್ಚುವ ಅಪಾಯ ಎದುರಿಸುತ್ತಿದೆ. ಹೊರಭಾಗದ ಮತ್ತು ಒಳ ಭಾಗದ ಗೋಡೆ ಕುಸಿಯುವ ಹಂತ ತಲುಪಿದೆ.
ಗೋಡೆಯ ಬಿರುಕಿನ ಮೂಲಕ ಹಾವುಗಳು ಗ್ರಂಥಾಲಯದ ಒಳಗೆ ಹೋಗುವ ಆತಂಕವೂ ಇದೆ. ಮಳೆ ಬಂದಾಗಲೆಲ್ಲ ಕಟ್ಟಡದ ಮೇಲ್ಭಾಗದಲ್ಲಿ ನೀರು ನಿಂತು ವಸ್ತಿಯಾಗಿದೆ. ಇದರಿಂದ ಪುಸ್ತಕಗಳಿಗೆ ಯಾವುದೆ ತೊಂದರೆ ಆಗಿಲ್ಲ. ಓದುಗರ ಮೇಲೆ ಯಾವಾಗ ಗೋಡೆ ಬೀಳುವುದೊ ಎಂಬ ಆತಂಕ ಇದೆ.
ಗಬ್ಬು ನಾಥ: ಗ್ರಂಥಾಲಯಕ್ಕೆ ಹೊಂದಿಕೊಂಡಂತೆ ಇರುವ ಮಹಾನಗರ ಪಾಲಿಕೆಗೆ ಸೇರಿದ ಕಟ್ಟಡದಲ್ಲಿ ಶೌಚಾಲಯ ಇದೆ. ಸಾರ್ವಜನಿಕರೆಲ್ಲರೂ ಬಳಸುವ ಶೌಚಾಲಯ ಈಗ ಗಬ್ಬು ನಾರುತ್ತಿದೆ. ಗ್ರಂಥಾಲಯದ ಒಳಗೆ ಕುಳಿತು ಓದುವವರಿಗೂ ಈ ಶೌಚಾಲಯದ ದುರ್ವಾಸನೆ ಮೂಗಿಗೆ ಬಡಿಯುತ್ತಿದೆ. ಅಲ್ಲಿ ಕುಳಿತು ಓದುವುದು ಬಹಳ ದುಸ್ತರ. ಮೂಗಿಗೆ ಬಟ್ಟೆ ಕಟ್ಟಿಕೊಂಡು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇದೆ.
ಅಂತೆಯೆ, ಕುವೆಂಪುನಗರ ಗ್ರಂಥಾಲಯದಲ್ಲಿಯೂ ಸಾಕಷ್ಟು ಸಮಸ್ಯೆ ಇದೆ. ಗ್ರಂಥಾಲಯವು ವಿಶ್ವಮಾನವ ಜೋಡಿ ರಸ್ತೆ ಬದಿಯ ವಿಶಾಲವಾದ ನಿವೇಶನದಲ್ಲಿದೆ. ಗ್ರಂಥಾಲಯದ ಕಿಟಕಿ- ಗಾಜುಗಳು ಒಡೆದು ಹೋಗಿವೆ. ಜೋರು ಮಳೆಬಂದಾಗ ಕಿಟಕಿ ಮೂಲಕ ಮಳೆ ನೀರು ಗ್ರಂಥಾಲಯದ ಒಳಗೆ ಎರಚುತ್ತದೆ. ಇದರಿಂದಾಗಿ ಓದುಗರಿಗೆ ಮಾತ್ರವಲ್ಲದೆ ಪುಸ್ತಕಗಳಿಗೂ ತೊಂದರೆ ತಪ್ಪಿದ್ದಲ್ಲ.
ತೊಂದರೆ: ಇಲ್ಲಿ ವಾಚಕರ ಕೊಠಡಿ ಮತ್ತು ಇತರೆ ಪುಸ್ತಕಗಳ ಕೊಠಡಿ ಒಂದೇ ಆಗಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಪತ್ರಿಕೆ ಓದುವವರು ಟೇಬಲಿನ ಮೇಲೆ ಪತ್ರಿಕೆ ಹರಡಿಕೊಂಡು ಓದುತ್ತಾರೆ.
ಇದರಿಂದ ಕತೆ, ಕಾದಂಬರಿ ಓದುಗರಿಗೆ ತೊಂದರೆಯಾಗಿದೆ. ಆದ್ದರಿಂದ ಇದೇ ಕಟ್ಟಡದ ಮೊದಲ ಮಹಡಿಯ ಕೊಠಡಿಯನ್ನು ವಾಚಕರಿಗೆ ಮೀಸಲಿಡಲು ಓದುಗರು ಒತ್ತಾಯಿಸಿದ್ದಾರೆ.
ಈ ಗ್ರಂಥಾಲಯಕ್ಕೆ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಗ್ರಂಥಾಲಯದ ಮುಂಭಾಗದಲ್ಲಿ ವಿಶಾಲವಾದ ಜಾಗವಿದೆ. ಇಲ್ಲಿ ಅನೇಕ ಟೂರ್ಸ್ ಮತ್ತು ಟ್ರಾವಲ್ಸ್ನ ವ್ಯಾನ್ ಮತ್ತು ಕಾರುಗಳು ಬಂದು ನಿಲ್ಲುತ್ತದೆ. ಅಲ್ಲದೆ, ಅಕ್ಕಪಕ್ಕದಲ್ಲಿ ಹೊಸದಾಗಿ ಮನೆ ಕಟ್ಟುವವರು ಅನುಪಯುಕ್ತ ವಸ್ತುವನ್ನು ಇಲ್ಲಿಯೆ ತಂದು ಬೀಸಾಡುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆದಲ್ಲಿರುವ ಈ ಗ್ರಂಥಾಲಯಕ್ಕೆ ಕನಿಷ್ಠ ರಕ್ಷಣಾ ಗೋಡೆ, ಕಟಕಿಗಳಿಗೆ ಗಾಜು ಮತ್ತು ಶೌಚಾಲಯ ವ್ಯವಸ್ಥೆಯನ್ನಾದರೂ ಕಲ್ಪಿಸಬೇಕು ಎಂಬುದು ಓದುಗರ ಮನವಿ.
- ಡಿ.ಎನ್. ಮಹೇಂದ್ರ