ಕೌಟಿಲ್ಯದಲ್ಲಿ ವಿಶಿಷ್ಟವಾಗಿ ಪರಿಸರ ದಿನಾಚರಣೆ
ಕ.ಪ್ರ.ವಾರ್ತೆ ಮೈಸೂರು ಜೂ. 6
ನಗರದ ಕೌಟಿಲ್ಯ ವಿದ್ಯಾಲಯದ ಆವರಣದಲ್ಲಿ ಶಾಲೆಯ ಎಕೋಕ್ಲಬ್ ವತಿಯಿಂದ ವಿಶಿಷ್ಟ ರೀತಿಯಲ್ಲಿ ವಿಶ್ವಪರಿಸರ ದಿನ ಆಚರಿಸಿತು.
ಅಕ್ಸಿಜನ್ ಏಕರ್ಸ್ ಸಂಸ್ಥೆಯ ನಿರ್ದೇಶಕ ಚಿದಾ ಶಿವಣ್ಣ ಅವರು ಮಣ್ಣಿನಲ್ಲಿ ಎರೆಹುಳುಗಳನ್ನು ಸೇರ್ಪಡೆಗೊಳಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾಲಯದ ಒಂದರಿಂದ 4ನೇ ತರಗತಿಯ ವಿದ್ಯಾರ್ಥಿಗಳು ಮರುಬಳಸಲ್ಪಡುವ ತ್ಯಾಜ್ಯವಸ್ತುಗಳಿಂದ ಅನೇಕ ಭಿತ್ತಿಪತ್ರಗಳು ಹಾಗೂ ವಿಜ್ಞಾನ ಮಾದರಿಗಳನ್ನು, 5 ಮತ್ತು 6ನೇ ತರಗತಿ ವಿದ್ಯಾರ್ಥಿಗಳು ಜಲಸಂರಕ್ಷಣೆಯ ಕುರಿತು ಚರ್ಚಾಸ್ಪರ್ಧೆಯನ್ನು ಹಾಗೂ 7ನೇ ತರಗತಿ ವಿದ್ಯಾರ್ಥಿಗಳು ಸಾವಯವ ಕೃಷಿ ಪದ್ಧತಿಯ ಅನುಕೂಲ ಬಿಂಬಿಸುವ ಸಹಜಕೃಷಿ ಎಂಬ ಕಿರುನಾಟಕವನ್ನು ನಡೆಸಿಕೊಟ್ಟರು. ವಿದ್ಯಾಲಯದ ಪ್ರಾಂಶುಪಾಲೆ ಎಲ್. ಸವಿತಾ, ಮುಖ್ಯೋಪಾಧ್ಯಾಯಿನಿಯರು, ವಿದ್ಯಾಲಯದ ಸಂಶೋಧನ ಮತ್ತು ಅಭಿವೃದ್ಧಿ ವಿಭಾಗದ ಡಾ. ಅನುಪಮಾ, ಜಯಂತ್, ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.