ಗಣ್ಯರ ಕೆಂಪು ದೀಪಕ್ಕೆ 'ರೆಡ್ ಸಿಗ್ನಲ್'
ಟಿ ಬಿ. ಶೇಖರ್ ಗೋಪಿನಾಥಂ
ಮೈಸೂರು: ವಾಹನಗಳ ಮೇಲೆ ಎಗ್ಗಿಲ್ಲದೆ ಬಳಸಲಾಗುತ್ತಿದ್ದ ಕೆಂಪು ದೀಪಕ್ಕೆ ಈಗ ಬ್ರೇಕ್ ಬಿದ್ದಿದೆ. ಈಗಾಗಲೇ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ವ್ಯಕ್ತಿಗಳ ಸರ್ಕಾರಿ ಅಧಿಕೃತ ವಾಹನಗಳ ಮೇಲೆ ಮಾತ್ರ ಕೆಂಪು ದೀಪ ಬಳಕೆಯನ್ನು ರಾಜ್ಯ ಸರ್ಕಾರವು ಸೀಮಿತಗೊಳಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗಣ್ಯ ವ್ಯಕ್ತಿಗಳ ವಾಹನಗಳ ಮೇಲೆ ಕೆಂಪು ದೀಪ ಬಳಕೆ ಸಂಬಂಧ ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಗಳನ್ನು ಹಿಂಪಡೆದು, ಪ್ರತಿಷ್ಠಿತ ವ್ಯಕ್ತಿಗಳ ಅಧಿಕೃತ ವಾಹನಗಳ ಮೇಲೆ ಮಾತ್ರ ವಿಐಪಿ ರೆಡ್ ಟಾಪ್ ಲೈಟ್ ಬಳಸಲು ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಿ ಹೊಸ ಅಧಿಸೂಚನೆ ಹೊರಡಿಸಿದೆ.
ಯಾರು ಬಳಸಬಹುದು?: ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಸಚಿವರು, ವಿಧಾನ ಪರಿಷತ್ ಸಭಾಪತಿ, ವಿಧಾನಸಭೆ ಸಭಾಧ್ಯಕ್ಷರು, ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಹಾಗೂ ಹಾಲಿ ನ್ಯಾಯಾಧೀಶರ ಅಧಿಕೃತ ವಾಹನಗಳ ಮೇಲೆ ಮಾತ್ರ ವಿಐಪಿ ರೆಡ್ ಟಾಪ್ ಲೈಟ್ (ಕೆಂಪು ದೀಪ) ಬಳಸಬೇಕು.
ಈ ಪ್ರತಿಷ್ಠಿತ ಗಣ್ಯರನ್ನು ಹೊರತುಪಡಿಸಿ ಬೇರೆ ಯಾರೂ ತಮ್ಮ ವಾಹನಗಳ ಮೇಲೆ ಕೆಂಪು ದೀಪ ಬಳಸುವಂತಿಲ್ಲ. ಸಚಿವರ ಸಮಾನ ಸ್ಥಾನಮಾನ ಹೊಂದಿರುವ ನಿಗಮ, ಮಂಡಳಿ, ಪ್ರಾಧಿಕಾರದ ಅಧ್ಯಕ್ಷರು, ಮುಖ್ಯಸ್ಥರು ಹಾಗೂ ಹೈಕೋರ್ಟ್ ನ್ಯಾಯಾಧೀಶರ ಸಮಾನ ಸ್ಥಾನಮಾನ ಹೊಂದಿರುವ ನ್ಯಾಯಮಂಡಳಿ, ವಿವಿಧ ಆಯೋಗಗಳ ಅಧ್ಯಕ್ಷರು, ಸದಸ್ಯರು ತಮ್ಮ ಅಧಿಕೃತ ವಾಹನಗಳ ಮೇಲೆ ಕೆಂಪು ದೀಪ ಅಳವಡಿಸಿಕೊಳ್ಳುವಂತಿಲ್ಲ.
ಇದೇ ರೀತಿ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳೂ ಸೇರಿದಂತೆ ಯಾವುದೇ ಸರ್ಕಾರಿ ಅಧಿಕಾರಿಗಳು ಮತ್ತು ಇತರೆ ಗಣ್ಯರು ತಮ್ಮ ಅಧಿಕೃತ ವಾಹನಗಳ ಮೇಲೆ ಕೆಂಪು ದೀಪ ಅಳವಡಿಸಿಕೊಳ್ಳುವಂತಿಲ್ಲ.
ಪ್ರತಿಷ್ಠಿತ ವ್ಯಕ್ತಿಗಳ ಭದ್ರತೆಗೆ ಉಪಯೋಗಿಸುವ ಪೊಲೀಸ್ ಎಸ್ಕಾರ್ಟ್ ವಾಹನಗಳು ಕೇಂದ್ರ ಮೋಟಾರು ವಾಹನ ನಿಯಮಗಳನ್ವಯ ನೀಲಿ ಬಣ್ಣದ ದೀಪ (ಬ್ಲ್ಯೂ ಟಾಪ್ ಲೈಟ್) ಅಳವಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಬೀರೇಶ್ ಸುತ್ತೋಲೆ ಹೊರಡಿಸಿದ್ದಾರೆ.