ಗುಣಾತ್ಮಕ ಸಂಶೋಧನೆ ನಡೆಸಿ: ಪ್ರೊ. ಇಂದಿರಾ
ಕ.ಪ್ರ.ವಾರ್ತೆ ಮೈಸೂರು ಜೂ. 6
ಸಮಾಜಕ್ಕೆ ಉಪಯೋಗಿಯಾದ ಗುಣಾತ್ಮಕ ಸಂಶೋಧನೆ ನಡೆಸಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಅಂತರಾಷ್ಟ್ರೀಯ ಕೇಂದ್ರದ ನಿರ್ದೇಶಕಿ ಪ್ರೊ. ಆರ್. ಇಂದಿರಾ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪ.ಜಾತಿ ಮತ್ತು ಪ.ಪಂಗಡ ಸಂಶೋಧನ ವಿದ್ಯಾರ್ಥಿಗಳಿಗೆ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಿದ್ದ ಎಸ್ಪಿಎಸ್ಎಸ್ ಮೂಲಕ ಸಂಶೋಧನಾ ವಿಧಾನ ಮತ್ತು ಮಾಹಿತಿ ವಿಶ್ಲೇಷಣೆ ಕುರಿತ ಹತ್ತು ದಿನಗಳ ರಾಷ್ಟ್ರೀಯ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಹಿಂದೆ ನಾವು ವಿದ್ಯಾರ್ಥಿಗಳಾಗಿದ್ದ ವೇಳೆ ಮಾಹಿತಿ ವಿಶ್ಲೇಷಣೆ ಮಾಡಲು ಈಗಿರುವಷ್ಟು ಆಧುನಿಕ ತಂತ್ರಜ್ಞಾನ ಇರಲಿಲ್ಲ. ಆದರೂ ಪರಿಶ್ರಮದಿಂದ ಅದನ್ನು ಸಾಧಿಸಿದ್ದೇವೆ. ಈಗ ಸಾಕಷ್ಟು ತಂತ್ರಜ್ಞಾನ ಬಳಕೆಯಲ್ಲಿದೆ.
ಇತ್ತೀಚಿಗೆ ಸಂಶೋಧಕರ ಸಂಖ್ಯೆ ಮತ್ತು ಸಂಶೋಧನಾ ಸಂಸ್ಥೆಗಳ ಸಂಖ್ಯೆಯೂ ಸಾಕಷ್ಟು ಪ್ರಮಾಣದಲ್ಲಿವೆ. ಎಸ್ಪಿಎಸ್ಎಸ್ ತಂತ್ರಜ್ಞಾನದ ಮೂಲಕ ಮಾಹಿತಿ ವಿಶ್ಲೇಷಣೆ ನಡೆಸಬಹುದಾಗಿದೆ. ಈ ಸವಲತ್ತನ್ನು ಸಂಪೂರ್ಣವಾಗಿ ಬಳಸಿಕೊಂಡು ಸಮಾಜಕ್ಕೆ ಉಪಯೋಗವಾಗುವ ಗುಣಾತ್ಮಕ ಸಂಶೋಧನೆ ನಡೆಸಬೇಕು ಎಂದರು.
ಇಲ್ಲಿ ಪಡೆದ ತರಬೇತಿ ಮತ್ತು ಮಾರ್ಗದರ್ಶನವನ್ನು ಇಲ್ಲಿಗೆ ಬಿಡದೆ ತಮ್ಮ ವಿದ್ಯಾರ್ಥಿಗಳಿಗೂ ತಿಳಿಸಿಕೊಡಬೇಕು. ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಾಗಾರದ ಶಿಬಿರಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ಮುಕ್ತ ವಿವಿ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿಯ ಹಾಸನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಯಶವಂತ ದೊಂಗ್ರೆ, ಕಾರ್ಯಾಗಾರದ ಸಂಚಾಲಕ ಡಾ. ಸಿ. ಮಹದೇವಮೂರ್ತಿ ಇದ್ದರು.