ಮಹಿಳೆ ಕೊಲೆ: ಮತ್ತೊಬ್ಬ ಆರೋಪಿ ಸೆರೆ
ಕ.ಪ್ರ.ವಾರ್ತೆ ಮೈಸೂರು ಜೂ. 6
ಮಹಿಳೆಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ದಕ್ಷಿಣ ಠಾಣೆ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಗುರುವಾರ ಬಂಧಿಸಿದ್ದಾರೆ.
ಮೈಸೂರು ತಾಲೂಕು ಮೆಲ್ಲಹಳ್ಳಿ ನಿವಾಸಿ ಲೋಕೇಶ್ ಬಂಧಿತ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೆಲ್ಲಹಳ್ಳಿ ನಿವಾಸಿಗಳಾದ ಮಲ್ಲಪ್ಪ ಮತ್ತು ಇವರ ಪುತ್ರ ವೆಂಕಟೇಶ ಪ್ರಸಾದ್ ಎಂಬವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೆಲ್ಲಹಳ್ಳಿ ನಿವಾಸಿ ಲೇ. ಸಾಕಯ್ಯ ಎಂಬವರ ಪತ್ನಿ ಗೀತಾ (26) ಕೊಲೆಯಾದವರು. ಗೀತಾ ಪತಿ ಸಾಕಯ್ಯ 8 ತಿಂಗಳ ಹಿಂದೆಯಷ್ಟೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಕಯ್ಯ ಅವರ ಅಣ್ಣ ಮಲ್ಲಪ್ಪನ ಪುತ್ರ ವೆಂಕಟೇಶಪ್ರಸಾದ್ ಮತ್ತು ಗೀತಾ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು.
ಈ ವಿಚಾರ ಗೊತ್ತಾಗಿ ಮಲ್ಲಪ್ಪ ತನ್ನ ತಮ್ಮನ ಪತ್ನಿ ಗೀತಾ ಜೊತೆ ಜಗಳ ತೆಗೆದು ಕೊಲೆ ಮಾಡಿದ್ದ. ಈ ಕೊಲೆಯನ್ನು ಮರೆಮಾಚಲು ತನ್ನ ಪುತ್ರ ವೆಂಕಟೇಶಪ್ರಸಾದ್ ಹಾಗೂ ಲೋಕೇಶ್ ಸಹಾಯದೊಂದಿಗೆ ಟ್ರ್ಯಾಕ್ಟರ್ನಲ್ಲಿ ಮೃತದೇಹವನ್ನು ಸಾಗಿಸಿ, ಗೋಣಿಚೀಲದಲ್ಲಿ ಕಟ್ಟಿ ವರಕೋಡು ಬಳಿಯ ಗೊರಮ ಕೆರೆಗೆ ಎಸೆದಿದ್ದರು.
ಆರೋಪಿಗಳಾದ ತಂದೆ, ಮಗನನ್ನು ಬಂಧಿಸಿದ್ದ ಪೊಲೀಸರು, ತಲೆ ಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ಲೋಕೇಶನನ್ನು ಸಹ ಬಂಧಿಸಿದ್ದಾರೆ.