ಶಾಲಾ ಮಕ್ಕಳ ಸುರಕ್ಷತೆಗೆ ಸೂಚನೆ
ಕ.ಪ್ರ.ವಾರ್ತೆ ಮೈಸೂರು ಜೂ. 6
ಈ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಾಹನಗಳು ಮಕ್ಕಳ ಸುರಕ್ಷತೆ ಕಟ್ಟುನಿಟ್ಟಾಗಿ ಕಾಪಾಡುವಂತೆ, ಮೇಲ್ವಿಚಾರಣೆ ನಡೆಸಲು ಬಾಲನ್ಯಾಯ ಮಂಡಳಿಯು ಜಿಲ್ಲೆಯ ರಸ್ತೆ ಸಾರಿಗೆ ಅಧಿಕಾರಿ, ಪೊಲೀಸ್ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಮತ್ತು ಮಕ್ಕಳ ರಕ್ಷಣಾಧಿಕಾರಿಗಳಿಗೆ ಸೂಚಿಸಿದೆ.
ಆಟೋ, ಒಮ್ನಿ ವಾಹನ ಮತ್ತು ಇತರೆ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವಾಗ ಅವರನ್ನು ದನಗಳಂತೆ ತುಂಬಿಸುವ ರೀತಿ ಅವಲಂಬಿಸಲಾಗುತ್ತದೆ. ಈ ಸಂಬಂಧ ಪತ್ರಿಕೆಗಳಲ್ಲಿ ಬಂದ ವರದಿ ಗಮನಿಸಿದ ಮಂಡಳಿಯ ಅಧ್ಯಕ್ಷರು ಹಾಗೂ ಮುಖ್ಯ ಸಿವಿಲ್ ನ್ಯಾಯಾಧೀಶ ಬಿ. ನಂದಕುಮಾರ್ ಮತ್ತು ಸದಸ್ಯರಾದ ಪಿ.ಪಿ. ಬಾಬುರಾಜ್ ಅವರು ಈ ನಿರ್ದೇಶನ ನೀಡಿದ್ದಾರೆ. ಮಕ್ಕಳನ್ನು ಕರೆದೊಯ್ಯುವ ವಾಹನಗಳಿಗೆ ಸೂಕ್ತವಾದ ನಿಯಮಾವಳಿ ರೂಪಿಸಿ, ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಾಲಾ ಶಿಕ್ಷಣವು ಮಕ್ಕಳಿಗೆ ಆನಂದ ಕೊಡುವಂತೆ ಇರಬೇಕು. ಅದು ಪ್ರತಿಯೊಂದು ಮಗುವಿನ ಹಕ್ಕು. ಪ್ರತಿಯೊಬ್ಬ ಮಗುವಿಗೂ ಆತ್ಮಗೌರವ ಮತ್ತು ಘನತೆ ಇರುತ್ತದೆ. ಅವರನ್ನು ಪ್ರಾಣಿಗಳಂತೆ ತುಂಬಿಸಿ ವಾಹನಗಳಲ್ಲಿ ಕರೆದೊಯ್ಯುವುದು ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಮಂಡಳಿಯು ಹೇಳಿದೆ. ಮಕ್ಕಳ ಸುರಕ್ಷಿತ ಪ್ರಯಾಣಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆ 15 ದಿನಗಳಲ್ಲಿ ವರದಿ ನೀಡುವಂತೆ ಮೇಲಿನ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಂಡಳಿ ಸದಸ್ಯ ಪಿ.ಪಿ. ಬಾಬುರಾಜ್, ಸರ್ಕಾರಿ ವೀಕ್ಷಣಾಲಯ ಅಧೀಕ್ಷ ಎಂ.ಕೆ.ಕುಮಾರಸ್ವಾಮಿ ತಿಳಿಸಿದ್ದಾರೆ.