ನುಡಿ ಜಾತ್ರೆಗೆ ದಕ್ಷಿಣ ಕಾಶಿ ಸಜ್ಜು
ಮಾ. ವೆಂಕಟೇಶ್
ಕ.ಪ್ರ.ವಾರ್ತೆ ಮೈಸೂರು ಜೂ. 7
ನಂಜನಗೂಡಿನಲ್ಲಿ ನಡೆಯಲಿರುವ ಹನ್ನೆರಡನೇ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಗತ್ಯವಾದ ಪೂರ್ವ ಸಿದ್ಧತೆಗಳು ಭರದಿಂದ ನಡೆದಿವೆ.
ನಂಜನಗೂಡಿನ ಕಪಿಲೆಯ ಮಡಿಲಿನಲ್ಲಿ ಜೂ. 15 ಮತ್ತು 16 ರಂದು ನಡೆಯಲಿರುವ ಈ ಅಕ್ಷರ ಜಾತ್ರೆಯಲ್ಲಿ ನಾಡಿನ ವಿವಿಧ ಭಾಗಗಳಿಂದ 30 ಕ್ಕೂ ಹೆಚ್ಚು ಮಂದಿ ಪ್ರಕಾಶಕರು ಹಾಗೂ ಲೇಖಕರು ಪುಸ್ತಕ ಮಳಿಗೆಯನ್ನು ತೆರೆಯಲಿದ್ದಾರೆ. 15 ಮಂದಿ ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಅವರೆಲ್ಲರಿಗೂ ಮಳಿಗೆ ತೆರೆಯಲು ಉಚಿತ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಚಂದ್ರಶೇಖರ್ ಕನ್ನಡಪ್ರಭಕ್ಕೆ ತಿಳಿಸಿದರು.
ಇದು 12 ನೇ ಸಾಹಿತ್ಯ ಸಮ್ಮೇಳವಾಗಿರುವುದರಿಂದ ನಾಡಿನ ಹಿರಿಯ ಹಾಗೂ ಕಿರಿಯ ಸಾಹಿತಿಗಳ 12 ವೈವಿಧ್ಯಮಯ ಕೃತಿಗಳನ್ನು ಹೊರತರಲಾಗುವುದು. ಸಮ್ಮೇಳನದ ವಿವಿಧ ಕಾರ್ಯಗಳನ್ನು ಸುಗಮವಾಗಿ ನಡೆಸುವ ಸಲುವಾಗಿ ಸ್ವಾಗತ ಸಮಿತಿ, ವೇದಿಕೆ ಸಮಿತಿ, ಪುಸ್ತಕ ಮಳಿಗೆ ಸಮಿತಿ, ಸನ್ಮಾನ ಸಮಿತಿ ಊಟೋಪಚಾರ ಸಮಿತಿ, ಕಾರ್ಯಕ್ರಮ ಸಮಿತಿ ಈ ಮುಂತಾದ 12 ಸಮಿತಿ ರಚಿಸಲಾಗಿದ್ದು, ಅವರು ಕ್ರಿಯಾಶೀಲರಾಗಿದ್ದಾರೆ ಎಂದರು.
ಉದ್ಘಾಟನೆಗೆ ಸಿಎಂ: ಜೂ. 15 ರಂದು ಬೆಳಗ್ಗೆ 11 ಕ್ಕೆ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಹಾಗೂ ಮಾಜಿ ಅಧ್ಯಕ್ಷ ನೆಲ್ಲೂರು ಪ್ರಸಾದ್ ಅವರು ಭಾಗವಹಿಸುವರು. ಸಮ್ಮೇಳನದ ಅಧ್ಯಕ್ಷರಾದ ಮಲೆಯೂರು ಗುರುಸ್ವಾಮಿ ಅವರ ಕಪಿಲೆ ಎಡಬದಿ ಕೃತಿಯನ್ನು ಸಾಹಿತಿ ಡಾ. ಸಿಪಿಕೆ ಲೋಕಾರ್ಪಣೆಗೊಳಿಸುವರು ಎಂದು ತಿಳಿಸಿದರು.
ನಂಜನಗೂಡಿನಲ್ಲಿ ನಾಟಕ ಕಂಪನಿ ನಡೆಸುವಾಗ ಕಂಪನಿಯ ಡೇರೆಗೆ ಬೆಂಕಿ ಬಿದ್ದು ಹಾಳಾದ್ದರಿಂದ ತಮ್ಮ ಬದುಕಿಗೆ ಹೊಸ ತಿರುವು ದೊರೆಯಿತು ಎಂದು ಸದಾ ಸ್ಮರಿಸುವ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಅವರು ಜೂ. 16 ರಂದು ಸಮ್ಮೇಳನದ ಸಮಾರೋಪ ಭಾಷಣ ಮಾಡುವರು. ನಂಜನಗೂಡು ತಾಲೂಕಿನ ವಿವಿಧ ಕ್ಷೇತ್ರಗಳ ಸಾಧಕರು ಸೇರಿದಂತೆ ಜಿಲ್ಲೆಯ 45 ಮಂದಿ ಸಾಧಕರನ್ನು ಸನ್ಮಾನಿಸಲಾಗುವುದು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸುವರು ಎಂದರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
ಎರಡು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಇದರ ಉಪಸಮಿತಿ ಅಧ್ಯಕ್ಷರಾಗಿ ಮಂಡ್ಯ ರಮೇಶ್ ಕಾರ್ಯ ನಿರ್ವಹಿಸುವರು. ನಟನ ತಂಡದಿಂದ ಚಾಮ ಚೆಲುವೆ ಹಾಗೂ ಕೃಪಾ ಫಡ್ಕೆ ತಂಡದವರಿಂದ ಕೆರೆಗೆ ಹಾರ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲದೆ, 30 ಜನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. 5 ಸಾವಿರ ಮಂದಿ ಪಾಲ್ಗೋಳ್ಳುವ ನಿರೀಕ್ಷೆಯಿದೆ. ಅವರೆಲ್ಲರಿಗೂ ಭೋಜನದ ತಯಾರಿಗೆ ಸಿದ್ಧತೆ ನಡೆದಿದೆ ಎಂದು ವಿವರಿಸಿದರು. ಮಾ. 30 ಮತ್ತು 31 ರಂದು ನಡೆಯಬೇಕಾಗಿದ್ದ ಈ ಸಮ್ಮೇಳನವನ್ನು ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಿದ್ದನ್ನು ಇಲ್ಲಿ ಸ್ಮರಿಸಬಹುದು.