ಪತ್ರಕರ್ತರಿಂದ ಅತ್ಯುತ್ತಮ ವರದಿ ಪ್ರಶಸ್ತಿ ಅರ್ಜಿ ಆಹ್ವಾನ
ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ 2012- 13ನೇ ಸಾಲಿನ ಕನ್ನಡ ಮತ್ತು ಇಂಗ್ಲಿಷ್ ವರದಿಗಳನ್ನು ವಾರ್ಷಿಕ ಪ್ರಶಸ್ತಿಗೆ ಆಹ್ವಾನಿಸಲಾಗಿದೆ. ಆಸಕ್ತರು 2012ರ ಜೂ. 1 ರಿಂದ 2013ರ ಮೇ 31 ರೊಳಗೆ ಪ್ರಕಟವಾಗಿರುವ ವರದಿಯನ್ನು ಕಳುಹಿಸಬಹುದು. ಕಳುಹಿಸುವವರು ಸಂಘದ ಸದಸ್ಯರಾಗಿದ್ದು, ಒಬ್ಬರು ಒಂದು ವರದಿ ಕಳುಹಿಸಬೇಕು. ಮೂರು ನಕಲಿ ಪ್ರತಿಯ ಜತೆಗೆ ಒಂದು ಮೂಲ ಪತ್ರಿಕೆ ಪ್ರತಿಯನ್ನು ಜೂ. 22 ರೊಳಗೆ ಸಂಘದ ಕಚೇರಿಯಲ್ಲಿ ಸಲ್ಲಿಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ದೀಪಕ್ ಕೋರಿದ್ದಾರೆ.
ಆಹ್ವಾನ: ವಾರ್ಷಿಕ ಪ್ರಶಸ್ತಿಗೆ ಸಂಘದ ಸದಸ್ಯರಾಗಿರುವ ಪತ್ರಿಕಾ ಛಾಯಾಗ್ರಾಹಕರು ತಮ್ಮ ಛಾಯಾಚಿತ್ರ ಮತ್ತು ವರದಿ- ದೃಶ್ಯದ ಕ್ಲಿಪಿಂಗ್ಸ್ ಕಳುಹಿಸಬಹುದು. 2012ರ ಜೂ. 1 ರಿಂದ 2013ರ ಮೇ 31 ರೊಳಗೆ ಪ್ರಕಟವಾಗಿರುವ ಛಾಯಾಚಿತ್ರವನ್ನು ಕಳುಹಿಸುವುದು. 8್ಗ12 ಅಳತೆಯ ಮೂರು ಛಾಯಾಚಿತ್ರ ಮತ್ತು ಫೋಟೋ ಪ್ರಕಟಗೊಂಡ ಪತ್ರಿಕೆಯ ಮೂಲ ಪ್ರತಿಯನ್ನು ನೀಡಬೇಕು. ವಿದ್ಯುನ್ಮಾನ ವರದಿ- ದೃಶ್ಯದ ಕ್ಲಿಪಿಂಗ್ಸ್ ಒಳಗೊಂಡ ಮೂರು ಸಿಡಿ ಪ್ರತಿಗಳನ್ನು ಜೂ. 22 ರೊಳಗೆ ನೀಡುವಂತೆ ಅವರು ಕೋರಿದ್ದಾರೆ. ಮೊ. 9741511340.
ಹಾಸ್ಟೆಲ್ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ
ಮೈಸೂರು: ಪ್ರೇಮ ವೈಫಲ್ಯದಿಂದ ಜಿಗುಪ್ಸೆಗೊಂಡ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾನಸ ಗಂಗೋತ್ರಿಯ ಗೌತಮ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ನಡೆದಿದೆ.ನಂಜನಗೂಡು ತಾಲೂಕು ಕಾರ್ಯ ಗ್ರಾಮದ ನಿವಾಸಿ ಮಹದೇವಪ್ಪ ಎಂಬವರ ಪುತ್ರ ಬಸವಣ್ಣ (22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮಹಾರಾಜ ಕಾಲೇಜಿನಲ್ಲಿ ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿದ್ದ ಈತ ಗೌತಮ ವಿದ್ಯಾರ್ಥಿ ನಿಲಯದ ಕೊಠಡಿ ಸಂಖ್ಯೆ 32 ರಲ್ಲಿ ವಾಸವಿದ್ದರು. ಬೆಳಗ್ಗೆ ಈತ ವಿದ್ಯಾರ್ಥಿ ನಿಲಯದ ಮಹಡಿಯ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೆ ಪ್ರೇಮವೈಫಲ್ಯ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.