ಮದ್ಯ ಮಾರಾಟ ಪ್ರಸ್ತಾವ ವಿರುದ್ಧ ಮಾನಿನಿಯರ ಪ್ರತಿಭಟನೆ
ಕ.ಪ್ರ.ವಾರ್ತೆ ಹುಣಸೂರು ಜೂ. 7
ಈ ಹಿಂದೆ ಮಹಿಳಾ ಸಂಘಗಳ ದಿಟ್ಟ ಹೋರಾಟದಿಂದಾಗಿ ಸಾರಾಯಿ ನಿಷೇಧ ಜಾರಿಯಾಗಿತ್ತು. ಆದರೆ, ಈಗಿನ ಸರ್ಕಾರ ಅಗ್ಗದ ಮದ್ಯ ನೀಡುವ ನೆಪದಲ್ಲಿ ಮಹಿಳೆಯರನ್ನು ಮತ್ತು ಮಕ್ಕಳನ್ನು ಬೀದಿಪಾಲು ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಹಾಶಕ್ತಿ ಮಹಿಳಾ ಮಹಾಸಂಘದ ಸದಸ್ಯರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟಿಸಿದರು.
ತಾಲೂಕು ಮಹಾಶಕ್ತಿ ಮಹಿಳಾ ಮಹಾಸಂಘದ ಸದಸ್ಯರು ಪಟ್ಟಣದ ಪುರಸಭಾ ಮೈದಾನದಿಂದ ಮೆರವಣಿಗೆ ಹೊರಟು ಕುಡಿತದಿಂದ ಮನೆ ಹಾಳು, ಕುಡುಕನ ಮನೆ- ಸ್ಮಶಾನಕ್ಕೆ ಸಮಾನ, ಹೆಂಡದ ಸಹವಾಸ ಹೆಂಡತಿ ಮಕ್ಕಳ ಉಪವಾಸ ಮುಂತಾದ ಘೋಷಣೆಗಳನ್ನು ಕೂಗುತ್ತಾ ಪ್ರಮುಖ ಬೀದಿಗಳ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಅಧ್ಯಕ್ಷೆ ಅತ್ತಿಗೋಡಿನ ಲಕ್ಷ್ಮೀ ಮಾತನಾಡಿದ, ಕಡಿಮೆ ದರದಲ್ಲಿ ಮದ್ಯ ಆಲೋಚನೆ ಹಾಗೂ ಗ್ರಾಮಗಳ ಸಣ್ಣ- ಪುಟ್ಟ ಅಂಗಡಿಗಳಲ್ಲಿ ಮತ್ತು ಮನೆಗಳಲ್ಲಿ ಕದ್ದುಮುಚ್ಚಿ ಮದ್ಯ ಮಾರಾಟ ಮಾಡುತ್ತಿರುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಉಪಾಧ್ಯಕ್ಷೆ ಮುಳ್ಳೂರು ಲಕ್ಷ್ಮಮ್ಮ,ಮುತ್ತುರಾಯನ ಹೊಸಳ್ಳಿ ಶಿವಮ್ಮ ಮಾತನಾಡಿ, ಮನೆ, ಪಡಿತರ ದಿನಸಿ ಅಂಗಡಿಗಳಲ್ಲಿ ಅಕ್ರಮ ಹಾಗೂ ಕಳಪೆ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ. ಸಾಕಷ್ಟು ಕುಟುಂಬಗಳಲ್ಲಿ ಕಲಹ, ಕೊಲೆಗಳಾಗಿವೆ. ಕಳಪೆ ಮದ್ಯ ಮಾರಾಟದ ಬಗ್ಗೆ ಅಬಕಾರಿ ಇಲಾಖೆಗೆ ಎಷ್ಟೇ ದೂರು ನೀಡಿದರೂ ಪ್ರಯೋಜನವಿಲ್ಲದಂತಾಗಿದೆ ಎಂದು ದೂರಿದರು.
56 ಗ್ರಾಮಗಳಿಂದ ಬಂದಿದ್ದ ನೂರಾರು ಮಹಿಳೆಯರು ಹಾಗೂ ಮಹಿಳಾ ಸಮುಖ್ಯದ ತಾಲೂಕು ಸಂಪನ್ಮೂಲ ವ್ಯಕ್ತಿ ಮರ್ಸಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಹುಲಿಗಮ್ಮ, ಆರತಿ ಭಾಗವಹಿಸಿದ್ದರು.