ಮೊಬೈಲ್ ಗೋಪುರ ದುಷ್ಪರಿಣಾಮ ತಡೆಗೆ ಮನವಿ
ಕ.ಪ್ರ.ವಾರ್ತೆ ಮೈಸೂರು ಜೂ. 7
ಜನನಿಬಿಡ ಸ್ಥಳಗಳಲ್ಲಿ ಮೊಬೈಲ್ ಗೋಪುರ ಸ್ಥಾಪಿಸಿರುವುದರಿಂದ ಅದು ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಕ್ರಮ ವಹಿಸುವಂತೆ ಗೋಕುಲಂ ನಿವಾಸಿಗಳ ಸಂಘದ ಅಧ್ಯಕ್ಷ ಸತೀಶ್ ಮನವಿ ಮಾಡಿದರು.
ನಗರದ ಗೋಕುಲಂ ಬಡಾವಣೆ ಪಾರ್ಕ್ ರಸ್ತೆಯ ಮನೆಯೊಂದರ ಮೇಲೆ ಸ್ಥಾಪಿಸಲಾಗಿರುವ ಮೊಬೈಲ್ ಗೋಪುರವನ್ನು ತೆರವುಗೊಳಿಸಬೇಕು. ಮನೆ ಮಾಲೀಕ ಹಣದ ಆಸೆಗಾಗಿ ಟವರ್ ಸ್ಥಾಪಿಸಿಕೊಂಡು ಸುತ್ತಮುತ್ತಲಿನ ನಿವಾಸಿಗಳ ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದಾರೆ. ಕಂಪನಿಯು ನಗರಪಾಲಿಕೆಯಿಂದ ಯಾವುದೇ ಅನುಮತಿ ಪಡೆಯದೆ ಗೋಪುರ ಸ್ಥಾಪಿಸಿರುವುದರಿಂದ ಬಹುತೇಕ ಮಂದಿ ಟವರ್ ರೇಡಿಯೇಷನ್ನಿಂದ (ತರಂಗಗಳು) ಒಂದಿಲ್ಲೊಂದು ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಗೋಕುಲಂ ಮುಖ್ಯರಸ್ತೆಯ ಮನೆ ನಂ. 3021,1ರಲ್ಲಿ ಸ್ಥಾಪಿಸಲಾಗಿರುವ ಗೋಪುರ ಟಾಟಾ ಡೊಕೊಮೊ, ಐಡಿಯಾ ಕಂಪನಿಗಳ ಅತೀ ಸಾಂಧ್ರತೆಯುಳ್ಳ 9 ರಿಸೀವರ್ಗಳನ್ನು ಅಳವಡಿಸಲಾಗಿದ್ದು, ಅತೀ ಅಪಾಯಕಾರಿ ವಿಕಿರಣ ಹೊರ ಸೂಸುವಿಕೆಯಿಂದ ಜನರಿಗೆ ತೊಂದರೆಯಾಗುತ್ತಿದೆ. ಪ್ರತಿ ಟವರ್ನಲ್ಲಿ 450 ಮಿನಿ ವ್ಯಾಟ್ನಷ್ಟು ವಿಕಿರಣ ಹೊರಸೂಸಬೇಕು. ಆದರೆ, ಇದರಲ್ಲಿ 5 ಸಾವಿರ ಮಿನಿ ವ್ಯಾಟ್ನಷ್ಟು ವಿಕಿರಣ ಹೊರಸೂಸುತ್ತದೆ. ಇದು ಕಾನೂನನ್ನು ಉಲ್ಲಂಘಿಸುತ್ತಿದೆ ಎಂದು ದೂರಿದರು.
ವಿಕಿರಣಗಳಿಂದ ಮನುಷ್ಯನಲ್ಲಿ ನರದೌರ್ಬಲ್ಯ, ತಲೆನೋವು, ನಿದ್ರಾಹೀನತೆ, ಬುದ್ಧಿಮಂದತೆ, ಕಿವಿದೋಷ, ಕೂದಲು ಉದುರುವುದು, ಚರ್ಮರೋಗ, ವಂಶಾಭಿವೃದ್ಧಿ ಕ್ಷೀಣತೆ, ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ತಗಲುತ್ತವೆ. ಇದರ ಅಪಾಯಕಾರಿಯನ್ನು ತಡೆಗಟ್ಟುವಂತೆ ನಗರಪಾಲಿಕೆಗೆ ಇಲ್ಲಿಯವರೆಗೆ 52 ಅರ್ಜಿ ಸಲ್ಲಿಸಿದ್ದೇವೆ. 65 ಆರ್ಟಿಐ ಅರ್ಜಿ ಸಲ್ಲಿಸಿದ್ದೇವೆ. ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಲವತ್ತುಕೊಂಡರು.
ಕಾಯಿದೆಯ ಪ್ರಕಾರ ಸಾರ್ವಜನಿಕ ಹಿತದೃಷ್ಟಿಯಿಂದ ಶಾಲಾ ಕಾಲೇಜು, ಆಸ್ಪತ್ರೆ, ಪಾರ್ಕ್, ದೇವಾಲಯ, ವಾಸ ಸ್ಥಳಗಲ್ಲಿ ಟವರ್ಗಳನ್ನು ಸ್ಥಾಪಿಸುವಂತಿಲ್ಲ. ಕಟ್ಟಡದ ಛಾವಣಿಯ ಮೇಲೆ ಮೊಬೈಲ್ ಟವರ್ಗಳ ಅಳವಡಿಕೆ ನಿಯಂತ್ರಿಸುವುದು, ಗ್ರಾಪಂ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪೂರ್ವಾನುಮತಿ ಪಡೆದುಕೊಳ್ಳುವುದು, ಪ್ರಸ್ತುತ ಚಾಲ್ತಿಯಲ್ಲಿರುವ ರೇಡಿಯೇಷನ್ ಮಾಪನಗಳ ಅನುಗುಣವಾಗಿ ಮೊಬೈಲ್ ಟವರ್ಗಳ ಸಮೀಪದ ಕಟ್ಟಡಗಳಿಂದ ದೂರದಲ್ಲಿ ಮತ್ತು ಭೂ ಹಾಗೂ ಸಮೀಪದ ಕಟ್ಟಡದ ಛಾವಣಿಗಿಂತ ಸಾಕಷ್ಟು ಎತ್ತರದಲ್ಲಿರಬೇಕು ಎಂಬ ನಿಯಮಗಳಿದ್ದರೂ ಗೋಕುಲಂನಲ್ಲಿ ಎಲ್ಲವನ್ನು ಉಲ್ಲಂಘಿಸಲಾಗಿದೆ ಎಂದರು.