ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಳೇಪುರ ಕೆರೆಗೆ ಕಾಯಕಲ್ಪ

Rashmi Kasaragodu
Updated On : 7 Jun 2013, 11:46 am

ಕ.ಪ್ರ.ವಾರ್ತೆ   ನಂಜನಗೂಡು   ಜೂ. 7
ತಾಲೂಕಿನ ಪ್ರಮುಖ ಪುರಾತನ ಕೆರೆಯಾದ ಹಳೇಪುರ ಕೆರೆಯನ್ನು ಅಭಿವೃದ್ಧಿಪಡಿಸುವಂತೆ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರು ನೀರಾವರಿ ಇಲಾಖೆಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಕಳೆದ 10 ದಿನಗಳಿಂದ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ.
ಸುಮಾರು 750 ಎಕರೆ ಪ್ರದೇಶದ ರೈತರ ಜಮೀನುಗಳಿಗೆ, 15 ಗ್ರಾಮಗಳ ರೈತರಿಗೆ ಜೀವನಾಡಿಯಾಗಿದ್ದ ಈ ಕೆರೆಗೆ ಕೆಲವು ವರ್ಷಗಳ ಹಿಂದೆ ಅವೈಜ್ಞಾನಿಕ ತಡೆಗೋಡೆ ನಿರ್ಮಿಸಿದ್ದರಿಂದ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿರಲಿಲ್ಲ. ಕೆರೆ ತುಂಬದೆ ಬಿದ್ದ ಮಳೆ ನೀರು ರೈತರ ಜಮೀನುಗಳಿಗೆ ನುಗ್ಗಿ ಫಸಲನ್ನು ನಾಶಪಡಿಸಿ, ಮಣ್ಣಿನ ಸವಕಳಿ ಮಾಡಿ ರೈತರಿಗೆ ಅನಾನುಕೂಲವಾಗುತ್ತಿದ್ದುದನ್ನು ಸ್ಮರಿಸಬಹುದು.
ಕಳೆದ ತಿಂಗಳು ಬಿದ್ದ ಭಾರಿ ಮಳೆಯಿಂದ ರೈತರ ಜಮೀನುಗಳಿಗೆ ನೀರು ನುಗ್ಗಿದ ಸಂದರ್ಭದಲ್ಲಿ ಹಳೇಪುರದ ಗ್ರಾಮಸ್ಥರು ಪ್ರತಿಭಟಿಸಿ ಕಾಮಗಾರಿ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದ್ದರು. ಕಂದಾಯ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ನೀರಾವರಿ ಇಲಾಖೆಯ ಎಇಇ ಕಾಂತರಾಜ್ ಅವರಿಗೆ ತಕ್ಷಣವೇ ಹಳೇಪುರ ಕೆರೆಯ ತಡೆಗೋಡೆಯ 2 ಬದಿಯಲ್ಲೂ ಬಂಟ್ಸ್ ನಿರ್ಮಿಸಿ, ಕಾಲುವೆ ವಿಸ್ತರಣೆಗೊಳಿಸಿ, ಶೇಖರಣೆಯಾದ ನೀರು ಸಮರ್ಪಕವಾಗಿ ಕಾಲುವೆಗಳ ಮೂಲಕ ಕೆರೆಗೆ ತಲುಪುವಂತೆ ಮಾಡಲು ಆದೇಶಿಸಿದ್ದರು.
ಹಳೇಪುರ ಕೆರೆಗೆ ಕಾಯಂ ಕಾಮಗಾರಿ ನಡೆಸಿ, ಸಾವಿರಾರು ರೈತರ ಬಾಳನ್ನು ಹಸನುಗೊಳಿಸುವಂತೆ ಸಚಿವರಲ್ಲಿ ಮನವಿ ಮಾಡಿಕೊಳ್ಳಲಾಗುವುದೆಂದು ನೇರಳೆ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಹಳೇಪುರ ಗ್ರಾಮದ ಡೇರಿ ಅಧ್ಯಕ್ಷ ಶ್ರೀಕಂಠಸ್ವಾಮಿ, ತಾಪಂ ಸದಸ್ಯೆ ಸವಿತಾ ರಂಗನಾಥ್ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement