ಇಂದು ಶ್ರೀನಿವಾಸ ಕಲ್ಯಾಣೋತ್ಸವ
ಕ.ಪ್ರ.ವಾರ್ತೆ ಮೈಸೂರು ಜೂ. 8
ತಿರುಪತಿಯ ತಿರುಮಲ ತಿರುಪತಿ ದೇವಸ್ಥಾನದ ಕಲ್ಯಾಣೋತ್ಸವ ಯೋಜನೆಯಡಿ ನಗರದ ಕಲ್ಯಾಣಗಿರಿಯಲ್ಲಿರುವ ಕಲ್ಯಾಣ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಜೂ. 9ರಂದು ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 6ಕ್ಕೆ ಸುಪ್ರಭಾತ ಸೇವೆ, 8ಕ್ಕೆ ಸಂಕಲ್ಪ, ಲಕ್ಷ್ಮೀನಾರಾಯಣ ಹೋಮ, ಪೂರ್ಣಾಹುತಿ, ಪ್ರಾಕಾರೋತ್ಸವ, ನಿವೇದನ, ಮಹಾಮಂಗಳಾರತಿ ಜರುಗಲಿದೆ. ಸಂಜೆ 4ಕ್ಕೆ ಮೈಸೂರಿನಲ್ಲಿ ಪ್ರಥಮ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ತಿರುಮಲ ತಿರುಪತಿ ದೇವಸ್ಥಾನದಿಂದ ನೇರವಾಗಿ ಬಂದು ತಿರುಕಲ್ಯಾಣ ಮಹೋತ್ಸವ ನಡೆಸಿಕೊಡಲಿದ್ದಾರೆ ಎಂದು ದೇವಸ್ಥಾನದ ಸಂಸ್ಥಾಪಕ ಎಚ್.ಬಿ. ಗಿರಿಧರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮವನ್ನು ಆಂಧ್ರಪ್ರದೇಶದ ಕಂದಾಯ ಸಚಿವ ರಘುವೀರ ರೆಡ್ಡಿ ಉದ್ಘಾಟಿಸಲಿದ್ದು, ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸುವರು. ತಿರುಮಲ ತಿರುಪತಿ ದೇವಸ್ಥಾನದ ಕಲ್ಯಾಣೋತ್ಸವ ಯೋಜನೆಯ ಮುಖ್ಯಸ್ಥ ರಾಮಕೃಷ್ಣ, ನಿರ್ವಹಣಾಧಿಕಾರಿ ವೆಂಕಟೇಶ್, ಗಣೇಶ, ಪಾಲುದಾರರಾದ ಜಗನ್ನಾಥ ಶೆಣೈ, ಗೋಪಿನಾಥ ಶೆಣೈ, ಸುಪ್ರೀಂ ಕೋರ್ಟಿನ ವಕೀಲ ಸಂಪತ್ ಅಯ್ಯಂಗಾರ್ ಅತಿಥಿಗಳಾಗಿ ಪಾಲ್ಗೊಳ್ಳುವರು.
ಶ್ರೀರಂಗಂನ ದೇವಸ್ಥಾನದ ಅರ್ಚಕ ಗೋವಿಂದರಾಜು ನೇತೃತ್ವದಲ್ಲಿ ಕಲ್ಯಾಣೋತ್ಸವದ ಎಲ್ಲಾ ಧಾರ್ಮಿಕ ವಿಧಿ- ವಿಧಾನಗಳು ನಡೆಯಲಿದ್ದು, ಬೆಳಗ್ಗೆ ಕ್ಯಾತಮಾರನಹಳ್ಳಿಯ ಹುಲಿಗೆಮ್ಮ ದೇವಸ್ಥಾನದಿಂದ ತಿರುಮಲ ತಿರುಪತಿ ದೇವಸ್ಥಾನದಿಂದ ಬಂದಿರುವ ಸ್ತಬ್ಧ ಚಿತ್ರಗಳ ಮೆರವಣಿಗೆ ಆರಂಭವಾಗಲಿದ್ದು, ಯರಗನಹಳ್ಳಿ, ಸಾತಕಳ್ಳಿ, ಸಿದ್ದಾರ್ಥನಗರ, ಶಿಕ್ಷಕರ ಕಾಲೋನಿ, ರಾಘವೇಂದ್ರನಗರ, ಜೆಎಸ್ಎಸ್ ಲೇಔಟ್, ಪೋಸ್ಟಲ್ ಕಾಲೋನಿ, ಶಂಕರ ಲೇಔಟ್ ಮತ್ತು ಕಲ್ಯಾಣಗಿರಿ ಮಾರ್ಗವಾಗಿ ದೇವಸ್ಥಾನ ತಲುಪಲಿದೆ. ಭಕ್ತಾದಿಗಳಿಗೆ 10 ಸಾವಿರ ಲಾಡು ವಿತರಿಸಲಾಗುವುದು ಎಂದರು.
ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಪಿ ವಿಜಯಕುಮಾರ್, ಭಜನಾ ಮಂಡಳಿಯ ಮುಖ್ಯಸ್ಥೆ ಲಕ್ಷ್ಮೀನಾರಾಯಣ, ನೀಲಕಂಠನ್, ವ್ಯವಸ್ಥಾಪನಾ ಮಂಡಳಿಯ ವೆಂಕಟೇಶ್, ಮಂಜುನಾಥ, ಸತ್ಯವತಿ ಇದ್ದರು.