ಮೂವರು ಬಾಲಕರಿಗೆ ದಂಡ
ಮೈಸೂರು: ವಾಹನವನ್ನು ಅಜಾಗರೂಕತೆಯಿಂದ ಓಡಿಸಿ ರಸ್ತೆಯಲ್ಲಿ ಅಪಘಾತ ಮಾಡಿದ ಮೂವರು ಬಾಲಕರಿಗೆ ಬಾಲನ್ಯಾಯ ಮಂಡಳಿಯು ದಂಡ ವಿಧಿಸಿ ತೀರ್ಪು ನೀಡಿದೆ. ಬನ್ನಿಮಂಟಪದಲ್ಲಿ ಮಹಿಳೆಯೊಬ್ಬರು ತನ್ನ ಪುಟ್ಟ ಮಗುವಿನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುವಾಗ 17 ವರ್ಷದ ಬಾಲಕನೊಬ್ಬ ಬೈಕಿನಲ್ಲಿ ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗು ನೆಲಕ್ಕೆ ಬಿದ್ದು ಗಾಯಗೊಂಡಿದ್ದರು. ಈ ಘಟನೆ ಬಗ್ಗೆ ಪೊಲೀಸರಿಗೆ ತಿಳಿಸುವುದಾಗಲಿ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವುದಾಗಲಿ ಮಾಡದೆ ಬಾಲಕನು ನಿರ್ಲಕ್ಷ್ಯ ತೋರಿದ. ವಾಹನ ಓಡಿಸುವ ಲೈಸನ್ಸ್ ಇರಲಿಲ್ಲ. ಎನ್.ಆರ್. ಸಂಚಾರ ಠಾಣೆ ಪೊಲೀಸರು ಸಲ್ಲಿಸಿದ ಅಂತಿಮ ವರದಿ ಪರಿಶೀಲಿಸಿದ ಮಂಡಳಿಯು, ಬಾಲಕನಿಗೆ 1200 ದಂಡ ವಿಧಿಸಿದೆ. ಅಲ್ಲದೆ, ಬಾಲಕನಿಗೆ ಆಪ್ತ ಸಮಾಲೋಚನೆ ನೀಡಿದ ನಂತರ ತಾಕೀತು ಮಾಡಿ ಕಳುಹಿಸಲಾಯಿತು. ಕೆಆರ್ಎಸ್ ರಸ್ತೆ ಮತ್ತು ಎನ್.ಆರ್. ಮೊಹಲ್ಲಾದಲ್ಲಿ ನಡೆದ ಎರಡು ಅಪಘಾತ ಪ್ರಕರಣಗಳಲ್ಲಿ 17 ವರ್ಷದ ಇಬ್ಬರು ಬಾಲಕರಿಗೆ ತಲಾ 1000 ದಂಡ ಕಟ್ಟುವಂತೆ ಮಂಡಳಿ ಆದೇಶಿಸಿದೆ. ಮುಖ್ಯ ಸಿವಿಲ್ ನ್ಯಾಯಾಧೀಶ ಮತ್ತು ಮಂಡಳಿ ಅಧ್ಯಕ್ಷ ಬಿ. ನಂದಕುಮಾರ್, ಸದಸ್ಯ ಪಿ.ಪಿ. ಬಾಬುರಾಜ್ ಒಳಗೊಂಡ ಪೀಠವು ಈ ತೀರ್ಪು ನೀಡಿದೆ.