ಲೋಕಸತ್ತಾ ಅಭ್ಯರ್ಥಿ ಖರ್ಚು 98 ಸಾವಿರ!
ಮೈಸೂರು: ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದರೆ ಮೂಟೆಗಟ್ಟಲೇ ಹಣ ಬೇಕು ಎಂದು ಘಟಾನುಘಟಿ ನಾಯಕರೇ ಹೇಳುವಾಗ ಲೋಕಸತ್ತಾ ಪಕ್ಷದ ಅಭ್ಯರ್ಥಿ ಕೇವಲ 98 ಸಾವಿರ ಸಾಕು ಎಂದಿದ್ದಾರೆ.
ಹೌದು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಗರದ ಕೃಷ್ಣರಾಜ ಕ್ಷೇತ್ರದಿಂದ ಲೋಕಸತ್ತಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂಜಿನಿಯರ್ ಸಿ.ಕೆ. ನವೀನ್ ಕೇವಲ 98 ಸಾವಿರ ಖರ್ಚು ಮಾಡಿದ್ದು, ಈ ಎಲ್ಲಾ ಹಣವನ್ನು ದೇಣಿಗೆಯ ರೂಪದಲ್ಲಿ ಸಂಗ್ರಹಿಸಿದ್ದಾರೆ. ಮಿಕ್ಕಂತೆ ಸುಮಾರು 38 ಸಾವಿರ ಮೌಲ್ಯದ ಪ್ರಚಾರ ಸಾಮಗ್ರಿಯನ್ನು ಪಕ್ಷ ಒದಗಿಸಿದೆ.
ನಾನು ಯಾವುದೇ ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ರಾಜಕೀಯಕ್ಕೆ ಬಂದಿಲ್ಲ. ನಮ್ಮ ಉದ್ದೇಶವು ಒಂದು ಉತ್ತಮ ಸಮಾಜದ ನಿರ್ಮಾಣವಾಗಿದೆ. ನಮ್ಮ ಸಮಾಜವು ಪ್ರತಿಯೊಬ್ಬರ ಬೆಳವಣಿಗೆಗೂ ಪೂರಕವಾಗಿರಬೇಕು.
ಎಲ್ಲರನ್ನೂ ಮೇಲಕ್ಕೆ ತರಲು ಪ್ರಯತ್ನ ಮಾಡಬೇಕು ಎಂಬುದೇ ಆಗಿದೆ. ಅಧಿಕಾರ ಪಡೆಯದಿದ್ದರೂ ನಾವು ಈ ಕಾರ್ಯಕ್ಕೆ ಬದ್ಧರಾಗಿದ್ದೇವೆ. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಪ್ರಯತ್ನ ಪಡುತ್ತೇವೆ.
ಈ ಕಾರ್ಯವು ನಮ್ಮೆಲ್ಲರ ಆದ್ಯತೆಯಾಗಿದೆ ಎಂದು ಸಿ.ಕೆ. ನವೀನ್ ವಾದ ಮಂಡಿಸಿದ್ದಾರೆ.
ರಾಜಕೀಯವು ಹಣ, ಜಾತಿ ಮತ್ತು ಅಧಿಕಾರದವರೆಗೆ ಮಾತ್ರ ಎಂಬ ನಿಲುವನ್ನು ತಿರಸ್ಕರಿಸಿ, ರಾಜಕೀಯದಲ್ಲಿ ಉತ್ತಮರು ಮತ್ತು ಸುಶಿಕ್ಷತರು ಬರಬೇಕೆಂಬ ಲೋಕಸತ್ತಾ ಪಕ್ಷದ ಆದರ್ಶ ಬೆಂಬಲಿಸಿ, ಪಕ್ಷದ ಅಭ್ಯರ್ಥಿಯಾಗಿ ಕೃಷ್ಣರಾಜ ಕ್ಷೇತ್ರದಿಂದ ಸ್ಪರ್ಧಿಸಿದ್ದ ತಮಗೆ ಮತದಾರರು 1245 ಮತ ನೀಡಿದ್ದಾರೆ.
ಈ ಮೂಲಕ 5ನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದು ಜನರು ಮೌಲ್ಯಾಧಾರಿತ ರಾಜಕಾರಣಕ್ಕೆ ಮತ್ತು ಹೊಸತನಕ್ಕೆ ಬೆಲೆ ನೀಡುತ್ತಾರೆ ಎಂಬ ಸೂಚಕವಾಗಿದೆ ಎಂದು ಸ್ಮರಿಸಿದ್ದಾರೆ.