ದಾನಕ್ಕಿಂತ ಸಮಾಧಾನ ಮೇಲು: ವಿಶ್ವನಾಥ್
ಕ.ಪ್ರ.ವಾರ್ತೆ ಮೈಸೂರು ಜೂ. 9
ಇಂದಿನ ಜಾತಿ ವ್ಯವಸ್ಥೆಯಲ್ಲಿ ನೇತ್ರದಾನ, ರಕ್ತದಾನಕ್ಕಿಂತ ಸಮಾಧಾನ ಮುಖ್ಯ ಎಂದು ಸಂಸದ ಎಚ್. ವಿಶ್ವನಾಥ್ ಹೇಳಿದರು.
ನಗರದ ಗಾಯತ್ರಿಪುರಂನಲ್ಲಿ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಹಾಗೂ ಗಾಯಿತ್ರಿಪುರಂ ಸಮಸ್ತ ನಾಗರಿಕರ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ದೇಶದ 120 ಕೋಟಿ ಜನರಲ್ಲಿ ಸಾವಿರಾರು ಜಾತಿ ಇದೆ. ಆದ್ದರಿಂದ ಸಾಮರಸ್ಯದ ಮತ್ತು ಸಹೋದರ ಭಾವನೆ ಇರುವ ಸಮಾಧಾನ ಬೇಕು. ಅಂತಹ ಸಮಾಧಾನದ ಕೆಲಸಕ್ಕೆ ಮರಾಠ ಪರಿಷತ್ ನಾಂದಿ ಹಾಡಿದೆ. ಎಲ್ಲಾ ವರ್ಗದವರನ್ನು ಸೇರಿಸಿಕೊಂಡು ಈ ಕಾರ್ಯಕ್ರಮ ಆಯೋಜಿಸಿದೆ. ಅಭಿವೃದ್ಧಿ ಎರಡನೆಯ ವಿಷಯ.
ಆದರೆ, ಸಮಾಧಾನ ಇಲ್ಲದ ಅಭಿವೃದ್ಧಿಯಿಂದ ಯಾವುದೇ ಪ್ರಯೋಜನ ಇಲ್ಲ. ಎಲ್ಲರೂ ಒಂದಾಗಿದ್ದಾಗ ಮಾತ್ರ ಬದುಕು ಉಜ್ವಲಗೊಳ್ಳುತ್ತದೆ ಎಂದರು.
ಹಿಂದುಳಿದವರ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಕೊಡುಗೆ ಅಪಾರ. ಆದ್ದರಿಂದ ಅವರನ್ನು ಸ್ಮರಿಸಬೇಕು ಎಂದು ಹೇಳಿದರು.
ಸಂಸದ ಎಚ್. ವಿಶ್ವನಾಥ್, ಶಾಸಕರಾದ ತನ್ವೀರ್ಸೇಠ್, ವಾಸು, ಎಂ.ಕೆ. ಸೋಮಶೇಖರ್, ನಗರ ಪಾಲಿಕೆ ಸದಸ್ಯ ಸುನಿಲ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಪಾಲಿಕೆ ಸದಸ್ಯ ಶೌಕತ್ಪಾಷ, ಮಾಜಿ ಮೇಯರ್ ಎಚ್.ಎನ್. ಶ್ರೀಕಂಠಯ್ಯ, ಕಾಂಗ್ರೆಸ್ ಮುಖಂಡ ಧ್ರುವರಾಜ್, ಪರಿಷತ್ ಅಧ್ಯಕ್ಷ ಕೇಶವನಾಥ್ ಜಾದವ್ ಇದ್ದರು