ಪ್ರಾಯೋಗಿಕತೆಗೆ ಒತ್ತು ನೀಡಲಿ: ಕಾಗಲಿ
ಕ.ಪ್ರ.ವಾರ್ತೆ ಮೈಸೂರು ಜೂ. 9
ಶಾಲಾ- ಕಾಲೇಜುಗಳಲ್ಲಿ ಪಠ್ಯಕ್ರಮದ ಜತೆಗೆ ಹೆಚ್ಚುವರಿ ಪಠ್ಯೇತರ ಚಟುವಟಿಕೆ ಹಮ್ಮಿಕೊಂಡು ಪ್ರಾಯೋಗಿಕತೆಗೆ ಒತ್ತು ನೀಡಬೇಕು ಎಂದು ಬೆಂಗಳೂರು ವಿವಿ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಬಿ.ಎ. ಕಾಗಲಿ ಹೇಳಿದರು.
ಮೈಸೂರು ವಿಜ್ಞಾನ ಪ್ರತಿಷ್ಠಾನವು ಮಾನಂದವಾಡಿ ರಸ್ತೆಯಲ್ಲಿರುವ ಸಿಎಸ್ಆರ್ಟಿಐನಲ್ಲಿ ಹಮ್ಮಿಕೊಂಡಿದ್ದ ಕಾಸ್ಮೋಸ್- 2013 ವಿಶ್ವ ವಿಜ್ಞಾನದ ಅಂಶಗಳು ಮತ್ತು ದೂರದರ್ಶಕ ತಯಾರಿಕೆ ಕಾರ್ಯಾಗಾರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.
ಈ ರೀತಿಯ ಕಾರ್ಯಾಗಾರ ಹಮ್ಮಿಕೊಂಡು ಉಪಕರಣ ತಯಾರಿಸುವ ಬಗ್ಗೆ ತಿಳಿಸಿದ್ದು ಶ್ಲಾಘನೀಯ. ಸಾರ್ವಜನಿಕರಿಗೂ ವಿಜ್ಞಾನದ ಬಗ್ಗೆ ತಿಳಿಸಿಕೊಡಲು ವಿಜ್ಞಾನ ಅಭಿಯಾನ ಹಮ್ಮಿಕೊಂಡು ಅರಿವು ಮೂಡಿಸಬೇಕು.
ಜಪಾನ್ ದೇಶದಲ್ಲಿನ ಶಾಲಾ ಮಕ್ಕಳು ಆಕಾಶ ವೀಕ್ಷಿಸುವುದನ್ನು ಕಲಿತಿದ್ದಾರೆ. ನೋಡಿ ತಿಳಿ- ಮಾಡಿ ಕಲಿ ತತ್ವದ ಮೇಲೆ ಮಕ್ಕಳು ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿಜ್ಞಾನ ಪ್ರತಿಷ್ಠಾನದ ಉಪಾಧ್ಯಕ್ಷ ಡಾ.ಟಿ. ಶಿವಲಿಂಗಸ್ವಾಮಿ ಮಾತನಾಡಿ, ನಮ್ಮ ಪ್ರತಿಷ್ಠಾನದಿಂದ ಈ ವರ್ಷದಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅದರಲ್ಲೂ ಪ್ರಾಯೋಗಿಕ ಚಟುವಟಿಕೆಗಳೇ ಹೆಚ್ಚಿವೆ. ಈ ಕಾರ್ಯಕ್ರಮದಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಒಟ್ಟು 55 ಮಂದಿ ಭಾಗವಹಿಸಿ ದೂರದರ್ಶಕ ತಯಾರಿಸುವ ಬಗ್ಗೆ ತಿಳಿದುಕೊಂಡರು ಎಂದರು.
ಮುಖ್ಯ ಅತಿಥಿಗಳಾಗಿ ಜೈನ್ ವಿವಿಯ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಂ.ವೈ. ಆನಂದ, ಪ್ರತಿಷ್ಠಾನದ ಖಜಾಂಚಿ ಎಂ.ಜಿ.ಎನ್. ಪ್ರಸಾದ್, ಟ್ರಸ್ಟಿ ವೈಜಯಂತಿ, ಕಾರ್ಯದರ್ಶಿ ಜಿ.ಬಿ. ಸಂತೋಷ್ಕುಮಾರ್, ಗೌರವ ಅಧ್ಯಕ್ಷ ನಂದನ್ ಇದ್ದರು. ಶಿಬಿರಾರ್ಥಿ ಶ್ರೀನಿವಾಸ, ಸಂಪನ್ಮೂಲ ವ್ಯಕ್ತಿ ಡಾ.ಎ. ರಘು ಅಭಿಪ್ರಾಯ ಹಂಚಿಕೊಂಡರು. ಎನ್. ಮಹದೇವಪ್ಪ ನಿರೂಪಿಸಿದರು.