ರಂಗಾಯಣದಲ್ಲಿ ಹವ್ಯಾಸಿ ನಾಟಕೋತ್ಸವ ಆರಂಭ
ಕ.ಪ್ರ.ವಾರ್ತೆ ಮೈಸೂರು ಜೂ. 9
ರಂಗಭೂಮಿಯನ್ನು ಪುನರುತ್ಥಾನಗೊಳಿಸಿದ ಕೀರ್ತಿ ಹವ್ಯಾಸಿ ಕಲಾವಿದರಿಗೆ ಸಲ್ಲುತ್ತದೆ ಎಂದು ಜಾನಪದ ತಜ್ಞ ಡಾ.ಪಿ.ಕೆ. ರಾಜಶೇಖರ ಅಭಿಪ್ರಾಯಪಟ್ಟರು.
ರಂಗಾಯಣವು ಭಾನುವಾರ ಭೂಮಿಗೀತದಲ್ಲಿ ಆಯೋಜಿಸಿದ್ದ ಹವ್ಯಾಸಿ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ನಾಟಕ ಕುರುಹು ಪಂಪ ಭಾರತದಲ್ಲಿ ಕಾಣುತ್ತದೆ. ಅಲ್ಲಿಯ ಸಂಭಾಷಣೆ ಓದಿದವರಿಗೆಲ್ಲ ಆಹ್ಲಾದಕರ ಉಂಟು ಮಾಡುತ್ತಿತ್ತು. ನಂತರ ಹಳಗನ್ನಡ ಕಾಲದಲ್ಲಿ ಅದು ಮುಂದುವರಿಯಿತು. 20ನೇ ಶತಮಾನದ ಆದಿ ಭಾಗದಲ್ಲಿ ಹೆಚ್ಚು ಪ್ರಚಾರಕ್ಕೆ ಬಂದ ನಾಟಕಗಳು ಜನರಿಗೆ ಮುದ ನೀಡುತ್ತಿದ್ದವು ಎಂದರು.
ನಾಟಕ ನೋಡುವುದರಿಂದ ಸಂಸ್ಕಾರ ಮೈಗೂಡುತ್ತದೆ. ಸಾಂಸ್ಕೃತಿಕ ಶ್ರೀಮಂತಿಕೆ ಲಭಿಸುತ್ತದೆ. ಕಲಾವಿದರು ತಮ್ಮ ಅಭಿನಯದ ಮೂಲಕ ನೋಡುಗರನ್ನು ಸಹೃದಯಿಗಳನ್ನಾಗಿ ಮಾಡುತ್ತಾರೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಹಾಗೂ ರಂಗಾಯಣ ನಿರ್ದೇಶಕ ಕೆ.ಆರ್. ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ರಂಗಾಯಣ ಸಂಚಾಲಕ ಕೆ. ಅಂಜುಸಿಂಗ್ ಅತಿಥಿಯಾಗಿ ಭಾಗವಹಿಸಿದ್ದರು. ನಂತರ ರಾಜಪ್ಪ ದಳವಾಯಿ ರಚಿತ, ಪ್ರಶಾಂತ್ ಮೈಸೂರು ನಿರ್ದೇಶನದ ಒಂದು ಬೊಗಸೆಯ ನೀರು ನಾಟಕವನ್ನು ಇಂಟಿಮೇಟ್ ಥಿಯೇಟರ್ ಕಲಾವಿದರು ಅಭಿನಯಿಸಿದರು.