ಸಾರಿಗೆ ಬಸ್ ಡಿಕ್ಕಿ: ಬೈಕ್ ಸವಾರ ಸಾವು
ಹುಣಸೂರು: ಸಾರಿಗೆ ಬಸ್ ಡಿಕ್ಕಿಯಾಗಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ಬೈಪಾಸ್ ರಸ್ತೆಯ ಡ್ರಿಮ್ ಲ್ಯಾಂಡ್ ಹೊಟೇಲ್ ಬಳಿ ಭಾನುವಾರ ನಡೆದಿದೆ.
ತೆಂಕಲಕೊಪ್ಪಲು ನಿವಾಸಿ ಟಿ.ಆರ್. ಶಿವಪ್ಪ ಎಂಬವರ ಪುತ್ರ ಯೋಗೇಶ್ (30) ಮೃತಪಟ್ಟವರು. ಇವರು ಸ್ವಗ್ರಾಮದಿಂದ ಸ್ನೇಹಿತನ ಬೈಕಿನಲ್ಲಿ ಹುಣಸೂರು ಕಡೆಗೆ ಬರುತ್ತಿದ್ದಾಗ ಬೆಂಗಳೂರಿನಿಂದ ಕೊಡಗಿನ ನಾಪೋಕ್ಲು ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಿಂಬದಿಯಿಂದ ಬೈಕಿಗೆ ಡಿಕ್ಕಿಯಾಗಿದೆ. ಬಸ್ಸಿನಡಿಗೆ ಸಿಕ್ಕಿದ ಬೈಕನ್ನು ಸುಮಾರು ದೂರು ಏಳೆದೊಯ್ದಿದೆ. ಇದರಿಂದ ಸವಾರನ ತಲೆ, ಕೈ ಕಾಲು, ಎದೆ ಭಾಗಕ್ಕೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಹುಣಸೂರು ಪಟ್ಟಣ ಠಾಣೆಯ ಎಸ್ಐ ಹರಿವರ್ಧನ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.