ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಳ್ಳ ಹಿಡಿದ 'ಎಲ್ಡಿಎಂಸಿ'

Rashmi Kasaragodu
Updated On : 10 Jun 2013, 12:02 pm

ಡಿ.ಎನ್. ಮಹೇಂದ್ರ
ಕ.ಪ್ರ.ವಾರ್ತೆ  ಮೈಸೂರು  ಜೂ. 9
ಶಾಲೆಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗಾಗಿ ಸರ್ಕಾರ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯಂತೆ ಗ್ರಂಥಾಲಯಗಳ ಅಭಿವೃದ್ಧಿಗೆ ಎಲ್ಡಿಎಂಸಿ (ಗ್ರಂಥಾಲಯ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ) ಸಹ ರಚಿಸಿಕೊಳ್ಳಲು ಅವಕಾಶ ಇದೆ.
ಎಲ್ಲಿದೆ ಎಂದು ಕೇಳಬೇಡಿ. ಇದಕ್ಕೆ ಉತ್ತರ ಸರ್ಕಾರಿ ಆದೇಶದಲ್ಲಿದೆ ಎಂಬುದಷ್ಟೆ. ಏಕೆಂದರೆ ಬಹಳ ಮಂದಿಗೆ ಎಸ್ಡಿಎಂಸಿ ಮಾತ್ರ ತಿಳಿದಿದೆ. ಎಲ್ಡಿಎಂಸಿ ಎಂಬುದು ಯಾರಿಗೂ ತಿಳಿದಂತಿಲ್ಲ.
ಜಾರಿಯಾಗಿಲ್ಲ: ಶಾಲೆಯಂತೆ ಗ್ರಂಥಾಲಯ ಸಮುದಾಯದ ಒಂದು ಭಾಗ ಎಂಬುದು ಸರ್ಕಾರದ ನಂಬಿಕೆ. ಅದಕ್ಕಾಗಿಯೆ ಸಾರ್ವಜನಿಕರ ಒಳಗೊಳ್ಳುವಿಕೆಗಾಗಿ ಆರಂಭಿಸಲಾದ ಈ ಎಲ್ಡಿಎಂಸಿ ಯೋಜನೆ ರಾಜ್ಯದ ಸುಮಾರು ಶೇ. 90 ಗ್ರಾಮಗಳಲ್ಲಿ ಜಾರಿಗೆ ಬಂದಿಲ್ಲ. ಆರ್ಥಿಕವಾಗಿ ಬಲಿಷ್ಠವಾದ ಕೆಲವೊಂದು ಗ್ರಾಮಗಳಲ್ಲಿ ಜಾರಿಗೊಂಡಿರಬಹುದು.
ಎಲ್ಡಿಎಂಸಿ ಯೋಜನೆ ಜಾರಿಯಾಗದಿರಲು ಸಾಕಷ್ಟು ಕಾರಣ ಇದೆ. ಎಸ್ಡಿಎಂಸಿಯಲ್ಲಿ ಶಾಲೆಯ ಅಭಿವೃದ್ಧಿಗೆ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಯಿಂದ ಸಾಕಷ್ಟು ಅನುದಾನ ಲಭ್ಯವಾಗುತ್ತದೆ. ಆದ್ದರಿಂದ ಎಸ್ಡಿಎಂಸಿಯಲ್ಲಿ ಕೆಲಸ ಮಾಡಲು ಹಣ ಕೊರತೆ ಇರುವುದಿಲ್ಲ. ಒಂದಲ್ಲ ಒಂದು ರೀತಿಯ ಯೋಜನೆಗಳು ಜಾರಿಯಾಗುತ್ತದೆ. ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ.
ಆದರೆ, ಗ್ರಂಥಾಲಯಗಳಲ್ಲಿ ಏನೂ ನಡೆಯುವುದಿಲ್ಲ. ಏಕೆಂದರೆ ಗ್ರಂಥಾಲಯಕ್ಕೆ ಸರ್ಕಾರದಿಂದ ನೇರವಾಗಿ ಅನುದಾನ ಬರುವುದಿಲ್ಲ. ಬದಲಿಗೆ ಗ್ರಾಮ ಪಂಚಾಯಿತಿಗಳು ಸಂಗ್ರಹಿಸುವ ಸೆಸ್ ಮೂಲಕವೆ ಏನಾದರೂ ಕೆಲಸ ನಡೆಯಬೇಕು. ಆದರೆ, ಸಾಕಷ್ಟು ಗ್ರಾಮ ಪಂಚಾಯಿತಿಗಳು ಸೆಸ್ ಹಣವನ್ನು ಬಾಕಿ ಉಳಿಸಿಕೊಂಡಿರುವುದರಿಂದ ಗ್ರಂಥಾಲಯದ ಆದಾಯವೆ ಸೊರಗಿ ಹೋಗಿದೆ. ಜಿಲ್ಲೆಯಲ್ಲಿ 2.5 ಕೋಟಿ ಗ್ರಂಥಾಲಯ ಸೆಸ್ಅನ್ನು ಗ್ರಾಪಂಗಳು ಬಾಕಿ ಉಳಿಸಿಕೊಂಡಿವೆ. ಪರಿಸ್ಥಿತಿ ಹೀಗಿರುವಾಗ ಗ್ರಂಥಾಲಯ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಯಾರು ತಾನೆ ಬರುತ್ತಾರೆ. ಯಾರೂ ತಮ್ಮ ಸ್ವಂತ ಖರ್ಚಿನಿಂದ ಅಭಿವೃದ್ಧಿ ಮಾಡಲು ಅಧ್ಯಕ್ಷರಾಗುವುದಿಲ್ಲ. ಒಂದು ವೇಳೆ ಗ್ರಂಥಾಲಯಕ್ಕೆ ಕೊಡುಗೆ ನೀಡುವವರ ಸಂಖ್ಯೆ ಸಾಕಷ್ಟು ಮಂದಿ ಇದ್ದರೂ ಅವರ್ಯಾರು ಎಲ್ಡಿಎಂಸಿಯಲ್ಲಿ ಸ್ಥಾನ ಪಡೆಯಲು ಇಷ್ಟಪಡುವುದಿಲ್ಲ. ಈ ಕಾರಣದಿಂದ ಎಲ್ಡಿಎಂಸಿ ಎಂಬುದು ಕೇವಲ ಸರ್ಕಾರದ ಆದೇಶ ಪತ್ರದಲ್ಲಿಯೆ ಉಳಿದಿದೆ. ಬಹುಪಾಲು ಗ್ರಾಮಗಳಲ್ಲಿ ಚಾಲ್ತಿಯಲ್ಲಿ ಇಲ್ಲ.
ಎಲ್ಡಿಎಂಸಿಯಲ್ಲಿ ಗ್ರಾಮದ ಸ್ಥಳೀಯರೊಬ್ಬರು ಅಧ್ಯಕ್ಷರಾಗ ಬೇಕು. ಗ್ರಂಥಾಲಯದ ಮೇಲ್ವಿಚಾರಕರು ಸೇರಿದಂತೆ ಹಲವರು ಸದಸ್ಯರಾಗಿರಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement