ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹೊಸ ಕೋರ್ಸ್ಗೆ ಬೇಕು ಅನುಮತಿ

Rashmi Kasaragodu
Updated On : 10 Jun 2013, 12:07 pm

 ಬಿ. ಶೇಖರ್ ಗೋಪಿನಾಥಂ
ಕ.ಪ್ರ.ವಾರ್ತೆ  ಮೈಸೂರು  ಜೂ. 9
ಕಾಲೇಜು ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೊಸದಾಗಿ ಆರಂಭಿಸಲಾಗುತ್ತಿದ್ದ ಪದವಿ ಹಾಗೂ ಸ್ನಾತಕೋತ್ತರ ಕೋರ್ಸುಗಳಿಗೆ ಈಗ ಬ್ರೇಕ್ ಬಿದ್ದಿದೆ.ರಾಜ್ಯದ ಯಾವುದೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೊಸ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್ ಅಥವಾ ಕಾಂಬಿನೇಷನ್ಗಳನ್ನು ಆರಂಭಿಸಲು ಕಾಲೇಜು ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯಬೇಕಿದೆ. ಇಲಾಖೆ ಗಮನಕ್ಕೆ ತರದೆ ಹೊಸ ಕೋರ್ಸು ಆರಂಭಿಸಿದರೆ ಮುಂದಿನ ಪರಿಣಾಮಗಳಿಗೆ ಸಂಬಂಧಪಟ್ಟ ಪ್ರಾಂಶುಪಾಲರೇ ನೇರ ಹೊಣೆಯಾಗಲಿದ್ದಾರೆ ಎಂದು ಇಲಾಖೆ ಎಚ್ಚರಿಸಿದೆ.
ಇಲಾಖೆ ಗಮನಕ್ಕಿಲ್ಲ: ಕೆಲವು ಕಾಲೇಜುಗಳ ಪ್ರಾಂಶುಪಾಲರು ಹೊಸದಾಗಿ ಪದವಿ ಹಾಗೂ ಸ್ನಾತಕೋತ್ತರ ಕೋರ್ಸುಗಳನ್ನು ಆರಂಭಿಸುವ ಸಂಬಂಧ ಪ್ರಸ್ತಾವನೆಯನ್ನು ಕಾಲೇಜು ಶಿಕ್ಷಣ ಇಲಾಖೆಯ ಗಮನಕ್ಕೆ ತರುತ್ತಿಲ್ಲ. ಬದಲಿಗೆ ನೇರವಾಗಿ ಸರ್ಕಾರ ಅಥವಾ ವಿಶ್ವವಿದ್ಯಾನಿಲಯಕ್ಕೆ ಪ್ರಸ್ತಾಪಿಸಿ, ಹೊಸದಾಗಿ ಕೋರ್ಸ್, ಕಾಂಬಿನೇಷನ್ಗಳನ್ನು ಆರಂಭಿಸಲಾಗುತ್ತಿತ್ತು.
ಈ ವಿಚಾರವನ್ನು ಕಾಲೇಜು ಶಿಕ್ಷಣ ಇಲಾಖೆಯು ಗಂಭೀರವಾಗಿ ಪರಿಗಣಿಸಿದ್ದು, ಇಲ್ಲಿಯವರೆಗೂ ಇಲಾಖೆಯ ಗಮನಕ್ಕೆ ತಾರದೇ ನೇರವಾಗಿ ಸರ್ಕಾರದಿಂದ, ವಿಶ್ವವಿದ್ಯಾನಿಲಯದಿಂದ ಹೊಸದಾಗಿ ಪದವಿ ಹಾಗೂ ಸ್ನಾತಕೋತ್ತರ ಕೋರ್ಸುಗಳನ್ನು ಆರಂಭಿಸಿರುವ ವಿವರಗಳನ್ನು ಆಯಾ ಕಾಲೇಜು ಪ್ರಾಂಶುಪಾಲರು ದಾಖಲಾತಿಯೊಂದಿಗೆ ಒದಗಿಸುವಂತೆ ಇಲಾಖೆ ಸೂಚಿಸಿದೆ.
ಅಲ್ಲದೆ, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರು, ಧಾರವಾಡ ಮತ್ತು ಗುಲ್ಬರ್ಗ ಪ್ರಾದೇಶಿಕ ಜಂಟಿ ನಿರ್ದೇಶಕರು ಹಾಗೂ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರುಗಳಿಗೆ ಕಾಲೇಜು ಶಿಕ್ಷಣ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.


ಇಲಾಖೆ ಗಮನಕ್ಕೆ ಯಾಕೆ ತರಬೇಕು?
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೊಸ ಕೋರ್ಸ್ ಆರಂಭಿಸುವ ಸಂಬಂಧ ಪ್ರಸ್ತಾವನೆಯನ್ನು ಪ್ರಾದೇಶಿಕ ಜಂಟಿ ನಿರ್ದೇಶಕರ ಮೂಲಕ ಕೇಂದ್ರ ಕಚೇರಿಗೆ ಕಳುಹಿಸಬೇಕು. ಈ ಪ್ರಸ್ತಾವನೆ ಸಮರ್ಪಕವಾಗಿದ್ದಲ್ಲಿ ಸರ್ಕಾರಕ್ಕೆ ಪ್ರಸ್ತಾಪಿಸಿ, ಸದರಿ ಕೋರ್ಸ್, ಕಾಂಬಿನೇಷನ್ಗಳನ್ನು ಆರಂಭಿಸಲು ಅನುಮತಿ ಪಡೆದು, ನಂತರ ಸಂಬಂಧಿಸಿದ ವಿಶ್ವವಿದ್ಯಾನಿಲಯದಿಂದ ಸಂಯೋಜನೆ ಪಡೆದು ಆರಂಭಿಸುವುದು ಕ್ರಮಬದ್ಧವಾಗಿರುತ್ತದೆ. ಈ ರೀತಿ ಕೋರ್ಸ್ ಆರಂಭಿಸುವುದರಿಂದ ಕಾಲೇಜುಗಳಿಗೆ ಸಂಬಂಧಿಸಿದ ಅಧ್ಯಾಪಕರನ್ನು ನಿಯೋಜಿಸಲು ಹಾಗೂ ಮೂಲ ಸೌಲಭ್ಯಗಳಿಗೆ ಅನುದಾನ ವಿಂಗಡಿಸಲು ಸಾಧ್ಯವಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement