ಮರುಮೌಲ್ಯಮಾಪನದಲ್ಲಿ ನಿಶ್ಚಯ್ಗೆ 2ನೇ ಸ್ಥಾನ
ಕ.ಪ್ರ.ವಾರ್ತೆ ಮೈಸೂರು ಜೂ. 10
ಎಸ್ಸೆಸ್ಸೆಲ್ಸಿ ಫಲಿತಾಂಶದ ಮರುಮೌಲ್ಯಮಾನಪಕ್ಕೆ ಮನವಿ ಸಲ್ಲಿಸಿದ್ದ ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯ ನಿಶ್ಚಯಪ್ರಸಾದ್ 621 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.
ಕಳೆದ ಮೇ 6 ರಂದು ಪ್ರಕಟವಾಗಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬೆಂಗಳೂರಿನ ವಿಜಯ ಪ್ರೌಢಶಾಲೆಯ 622 ಅಂಕ ಗಳಿಸಿ ಪ್ರಥಮ ಸ್ಥಾನದಲ್ಲಿದ್ದರೆ, ಬೆಂಗಳೂರಿನ ಹೋಲಿ ಚೈಲ್ಡ್ ಇಂಗ್ಲಿಷ್ ಶಾಲೆಯ ಕೆ. ನಾಗಾರ್ಜುನ, ಕೊಣಾಜೆಯ ವಿಶ್ವ ಮಂಗಳ ಇಂಗ್ಲಿಷ್ ಶಾಲೆ ಎಂ.ಕೆ. ಮನ್ವಿತಾ, ಶಿವಮೊಗ್ಗದ ಆದಿಚುಂಚನಗಿರಿ ಪ್ರೌಢಶಾಲೆಯ ಪ್ರೇರಣಾ 621 ಅಂಕ ಪಡೆಯುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದರು. ನಿಶ್ಚಯಪ್ರಸಾದ್ ಈ ಮೊದಲು 616 ಅಂಕ ಗಳಿಸಿದ್ದರು. ಮರುಮೌಲ್ಯಮಾಪನದಲ್ಲಿ 5 ಅಂಕ ಬಂದುದರಿಂದ 621 ಅಂಕ ಗಳಿಸಿ ಈ ಮೂವರೊಂದಿಗೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.
ಈ ಹಿಂದೆ ಪ್ರಕಟವಾಗಿದ್ದ ಫಲಿತಾಂಶದಲ್ಲಿ ಸಂಸ್ಕೃತ 122, ಇಂಗ್ಲಿಷ್ 96 ಅಂಕ ಪಡೆದಿದ್ದರು. ಈ ಎರಡಲ್ಲೂ ಅತೃಪ್ತಿ ಹೊಂದಿದ್ದ ನಿಶ್ಚಯ ಪ್ರಸಾದ್ ಮರುಮೌಲ್ಯಮಾಪನಕ್ಕೆ ಮನವಿ ಸಲ್ಲಿಸಿದ್ದರು. ಇದೀಗ ಸಂಸ್ಕೃತದಲ್ಲಿ 124, ಇಂಗ್ಲಿಷ್ನಲ್ಲಿ 99 ಅಂಕ ಪಡೆದಿದ್ದಾನೆ. ಉಳಿದಂತೆ ಕನ್ನಡ 100, ಗಣಿತ 100, ವಿಜ್ಞಾನ 98, ಸಮಾಜ ವಿಜ್ಞಾನ 100 ಅಂಕ ಪಡೆದಿದ್ದಾರೆ.
ಈ ಫಲಿತಾಂಶದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ನಿಶ್ಚಯಪ್ರಸಾದ್, ಮೊದಲ ಫಲಿತಾಂಶ ಬಂದಾಗಲೂ ಖುಷಿಯಿಂದ ಇದ್ದೆ. ಈಗಲೂ ಖುಷಿಯಿಂದ ಇದ್ದೇನೆ. ನಾನು ಅಂಕ ಗಳಿಸಲು ಓದಲಿಲ್ಲ. ಓದಿನಲ್ಲಿ ಶಿಸ್ತು ಮೈಗೂಡಿಸಿಕೊಂಡು ಅಂದುಕೊಂಡಿರುವ ಗುರಿ ಮುಟ್ಟುವುದು ನನ್ನ ಉದ್ದೇಶವಾಗಿತ್ತು. ಆದರೂ ನನ್ನ ಪರಿಶ್ರಮಕ್ಕೆ ತಕ್ಕ ಫಲಿತಾಂಶ ಬಂದಿದೆ ಎಂದರು.