ಆರಾಧನಾ ಯೋಜನೆಯಲ್ಲಿ ಅಕ್ರಮ: ರೈತ ಸಂಘ ಧರಣಿ
ಕ.ಪ್ರ.ವಾರ್ತೆ ಟಿ.ನರಸೀಪುರ ಜೂ. 11
ಮುಜರಾಯಿ ಇಲಾಖೆಯಲ್ಲಿನ ಆರಾಧನಾ ಯೋಜನೆಯ ಅನುದಾನವನ್ನು ಜಿಪಂ ಎಂಜಿನಿಯರ್ ಹಾಗೂ ಗುತ್ತಿಗೆದಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ತಾಲೂಕು ಕಚೇರಿ ಎದುರು ಮಂಗಳವಾರ ರೈತ ಸಂಘ ವತಿಯಿಂದ ಪ್ರತಿಭಟಿಸಿದರು.
ತಾಲೂಕು ಕಚೇರಿ ಎದುರು ಜಮಾವಣೆಗೊಂಡ ರೈತ ಸಂಘದ ಮುಖಂಡರು, 2011- 12ನೇ ಸಾಲಿನಲ್ಲಿ ತಾಲೂಕಿನ ಬೂದಹಳ್ಳಿ ಗ್ರಾಮದ ಗ್ರಾಮದೇವತೆ ಮಾರಮ್ಮ ದೇವಾಲಯಕ್ಕೆ ಸುಣ್ಣ ಬಳಿಯಲೆಂದು ಮುಜರಾಯಿ ಇಲಾಖೆ ಆರಾಧನಾ ಯೋಜನೆಯಡಿ ಮಂಜೂರು ಮಾಡಿದ ಅನುದಾನವನ್ನು ಎಂಜಿನಿಯರಯೊಬ್ಬರ ಕುಮ್ಮಕ್ಕಿನಿಂದ ಗುತ್ತಿಗೆದಾರನೊಬ್ಬ ದುರುಪಯೋಗ ಮಾಡಿಕೊಂಡಿದ್ದಾರೆ ಆರೋಪಿಸಿ ಪ್ರತಿಭಟನಾ ಧರಣಿ ನಡೆಸಿದರು.
ಈ ಸಂಬಂಧ ಅಧಿಕಾರಿಗಳು, ಎಂಜಿನಿಯರ್ ಅವನರನ್ನು ಅಮಾನತುಗೊಳಿಸಿ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ಗ್ರಾಮಸ್ಥರಿಗೆ ಅನುದಾನ ಕೊಡಿಸುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಕಾರರು ಎಚ್ಚರಿಸಿದರು.
ರೈತ ಸಂಘದ ಅಧ್ಯಕ್ಷ ಮಹದೇವ, ಕಾರ್ಯದರ್ಶಿ ಮಹದೇವಸ್ವಾಮಿ, ಮುಖಂಡರಾದ ಕೆ. ಕುಮಾರಸ್ವಾಮಿ, ಶಿವಣ್ಣ, ಮಲ್ಲೇಶ್, ಶಿವಕುಮಾರ್, ಶ್ರೀನಿವಾಸ್, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.