ಜಿಪಂ, ತಾಪಂ: ಇಬ್ಬರು ಅಭ್ಯರ್ಥಿಗಳು ಅನರ್ಹ
ಕ.ಪ್ರ.ವಾರ್ತೆ ಮೈಸೂರು ಜೂ. 11
ಕಳೆದ 2010ರಲ್ಲಿ ನಡೆದ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಸ್ಪರ್ಧಿಸಿ ವೆಚ್ಚ ವಿವರ ಸಲ್ಲಿಸದಿರುವ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 308ರಂತೆ ರಾಜ್ಯ ಚುನಾವಣಾ ಆಯೋಗವು ಮೈಸೂರು ಜಿಲ್ಲೆಯ ಇಬ್ಬರು ಅಭ್ಯರ್ಥಿಗಳನ್ನು ಅನರ್ಹಗೊಳಿಸಿ ಆದೇಶಿಸಿದೆ.
ಟಿ. ನರಸೀಪುರ ತಾಲೂಕು ತಲಕಾಡು ಜಿಪಂ ಕ್ಷೇತ್ರದ ಅಭ್ಯರ್ಥಿ ಜೆ. ಸುಂದರಮ್ಮ ಹಾಗೂ ಹುಣಸೂರು ತಾಲೂಕು ಗೋವಿಂದನಹಳ್ಳಿ ತಾಪಂ ಕ್ಷೇತ್ರದ ಅಭ್ಯರ್ಥಿ ವೈ.ಆರ್. ಧನಂಜಯಕುಮಾರ್ ಅವರನ್ನು ಅನರ್ಹಗೊಳಿಸಲಾಗಿದೆ. ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 308- ಬಿ ಹಾಗೂ ಪಂಚಾಯತ್ ರಾಜ್ (ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚ ಮಿತಿ) ನಿಯಮಗಳು 2005ರ ನಿಯಮ 2 ಮತ್ತು ಪಂಚಾಯತ್ ರಾಜ್ (ಜಿಲ್ಲಾ ಮತ್ತು ತಾಪಂ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚ ಮಿತಿ) ಆದೇಶ 2005ರ ಖಂಡ 3 ರಂತೆ ಚುನಾವಣಾ ವೆಚ್ಚಗಳ ಲೆಕ್ಕ ಪತ್ರವನ್ನು ನಿಗದಿತ ನಮೂನೆಯಲ್ಲಿ ಚುನಾವಣಾ ಫಲಿತಾಂಶ ಘೋಷಿತವಾದ 30 ದಿನಗಳೊಳಗೆ ಸಲ್ಲಿಸಬೇಕಾಗುತ್ತದೆ. ಈ ಸಂಬಂಧ ನೋಟಿಸ್ ಜಾರಿಗೊಳಿಸಿದ್ದರೂ ಆಯೋಗಕ್ಕೆ ವೆಚ್ಚದ ವಿವರ ನೀಡುವಲ್ಲಿ ವಿಫಲರಾಗಿದ್ದು, ಚುನಾವಣಾ ವೆಚ್ಚದ ಲೆಕ್ಕ ಪತ್ರ ಸಲ್ಲಿಸದೆ ಇರುವುದಕ್ಕೆ ಸರಿಯಾದ ಕಾರಣ ಅಥವಾ ಸಮರ್ಥನೆ ನೀಡಿಲ್ಲದಿರುವುದುದೃಢಪಟ್ಟಿರುವುದರಿಂದ ಆದೇಶದ ದಿನಾಂಕದಿಂದ ಆರು ವರ್ಷಗಳ ಅವಧಿಗೆ ಅನರ್ಹರೆಂದು ಘೋಷಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಆಯುಕ್ತರು ತಿಳಿಸಿದ್ದಾರೆ.