ಅತ್ತಿಗೆ ಮೇಲೆ ಅತ್ಯಾಚಾರ: ಮೈದುನ ಬಂಧನ
ಕ.ಪ್ರ. ವಾರ್ತೆ ಮೈಸೂರು ಜೂ.12
ಅತ್ತಿಗೆ ಮೇಲೆ ಅತ್ಯಾಚಾರ ಎಸಗಿರುವ ಆರೋಪದಡಿ ಮೈದುನನ್ನು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಟ್ಟಗಳ್ಳಿ ನಿವಾಸಿ ಹಾಗೂ ಪಾಕ್ಷಿಕವೊಂದರ ಸಂಪಾದಕ ಸುರೇಶ್ ಬಂಧಿತ ಆರೋಪಿ. ಈತ ಮೂಲತಃ ಪಿರಿಯಾಪಟ್ಟಣ ತಾಲೂಕು ಮನುಗನಹಳ್ಳಿ ನಿವಾಸಿ. ಅನಾರೋಗ್ಯದಿಂದ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಸಂಬಂಧಿಯೊಬ್ಬರನ್ನು ನೋಡಲು ಸುರೇಶ್ನ ಅತ್ತಿಗೆ ಹಾಗೂ ಮತ್ತೊಬ್ಬ ಮಹಿಳೆಯ ಜೂ. 5 ರಂದು ಮೈಸೂರಿಗೆ ಬಂದಿದ್ದರು. ಆಸ್ಪತ್ರೆಗೆ ಬಂದಿದ್ದ ಸುರೇಶ್ ಇಬ್ಬರಿಗೂ ಡ್ರಾಪ್ ಕೊಡುವ ನೆಪದಲ್ಲಿ ಕಾರಿನಲ್ಲಿ ಕರೆದುಕೊಂಡು, ವಿಜಯನಗರ 4ನೇ ಹಂತದಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ. ಜೊತೆಗಿದ್ದ ಮತ್ತೊಬ್ಬ ಮಹಿಳೆಯನ್ನು ಸ್ವಲ್ಪ ದೂರದಲ್ಲಿ ಇಳಿಸಿ, ಅತ್ತಿಗೆ ಮೇಲೆ ಕಾರಿನಲ್ಲಿ ಅತ್ಯಾಚಾರ ಎಸಗಿದ್ದ. ಈ ವಿಚಾರವನ್ನು ಯಾರಿಗೂ ಹೇಳದಂತೆ ಸುರೇಶ್ ಬೆದರಿಕೆ ಹಾಕಿದ್ದ.
ತಡವಾಗಿ ಪ್ರಕರಣ ಬೆಳಕಿಗೆ ಬಂದ ಮೇಲೆ ದೇವರಾಜ ಠಾಣೆ ಪೊಲೀಸರು ಆರೋಪಿ ಸುರೇಶನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.