ಅತ್ಯಾಚಾರ: ವ್ಯಕ್ತಿ ಬಂಧನ
ಮೈಸೂರು: ಯುವತಿ ಮೇಲೆ ಅತ್ಯಾಚಾರ ಎಸಗಿರುವ ಆರೋಪಿಯನ್ನು ಮೈಸೂರಿನ ಇಲವಾಲ ಠಾಣೆ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದು, ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೈಸೂರು ತಾಲೂಕು ಇಲವಾಲ ಹೋಬಳಿ ಹುಯಿಲಾಳು ಗ್ರಾಮದ ನಿವಾಸಿ ಚಿನ್ನಪ್ಪ ಎಂಬವರ ಪುತ್ರ ಬಸವರಾಜು (50) ಬಂಧಿತ ಆರೋಪಿ. ಈತನು ಅದೇ ಗ್ರಾಮದ ತೊದಲು ಮಾತನಾಡುವ 20 ವರ್ಷದ ಯುವತಿ ಮೇಲೆ ಸೋಮವಾರ ಅತ್ಯಾಚಾರ ಎಸಗಿದ್ದ. ಸ್ಥಳಕ್ಕೆ ಡಿವೈಎಸ್ಪಿ ಟಿ. ಸಿದ್ದಪ್ಪ, ಸರ್ಕಲ್ ಇನ್ಸ್ಪೆಕ್ಟರ್ ನೇಮಿರಾಜು, ಇಲವಾಲ ಠಾಣೆ ಎಸ್ಐ ವೆಂಕಟೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದರು. ಇಲವಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಬಸವರಾಜುನನ್ನು ಬಂಧಿಸಿ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಗ್ರೀನ್ ಬಡ್ಸ್ ವಿರುದ್ಧ ವಂಚನೆ ಪ್ರಕರಣ
ಮೈಸೂರು: ಗ್ರೀನ್ ಬಡ್ಸ್ ಅಗ್ರೋ ಫಾರಂ ಎಂಬ ಕಂಪನಿ ನಾಲ್ವರ ವಿರುದ್ಧ ನಜರ್ಬಾದ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರನಾಥ್, ಪ್ರಧಾನ ವ್ಯವಸ್ಥಾಪಕಿ ಗಾಯತ್ರಿ, ಏಜೆಂಟರಾದ ದೇವರಾಜ ಮತ್ತು ಗಿರಿಜಮ್ಮ ಎಂಬವರ ವಿರುದ್ಧ ರಾಚಪ್ಪ ಎಂಬವರು ದೂರು ನೀಡಿದ್ದಾರೆ. ತನ್ನಿಂದ 60 ಸಾವಿರ ಕಟ್ಟಿಸಿಕೊಂಡು, ಆ ಹಣ ವಾಪಸ್ ನೀಡದೆ ಕಂಪನಿಯವರು ವಂಚಿಸಿದ್ದಾರೆ ಎಂದು ರಾಚಪ್ಪ ಆರೋಪಿಸಿದ್ದಾರೆ. ನಜರ್ಬಾದ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಿಗಾಗಿ ಶೋಧಿಸುತ್ತಿದ್ದಾರೆ.
ಅಪರಿಚಿತ ಮಹಿಳೆ ಶವ ಪತ್ತೆ
ಮೈಸೂರು: ಹಾಸನ- ಮಾವಿನಕೆರೆ ರೈಲು ನಿಲ್ದಾಣಗಳ ಮಧ್ಯೆದ ಮಸರಹಳ್ಳಿ ಸಮೀಪ ಜೂ. 11ರಂದು ಸುಮಾರು 35 ವರ್ಷದ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ.ಯಾವುದೋ ರೈಲು ಗಾಡಿಗೆ ಸಿಕ್ಕಿ ಆಕೆ ಮೃತಪಟ್ಟಿದ್ದಾರೆ. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಈ ಅಪರಿಚಿತ ಮಹಿಳೆಯು ಗೋದಿ ಮೈಬಣ್ಣ, ತೆಳುವಾದ ಶರೀರ, ಎಡಗೈಯಲ್ಲಿ ಜೆಆರ್ ಎಂದು ಇಂಗ್ಲಿಷ್ ಅಕ್ಷರದ ಹಚ್ಚೆ ಇದೆ. ಮುಖ ಸಂಪೂರ್ಣ ಜಜ್ಜಿ ಹೋಗಿದ್ದು, ಚಹರೆ ಗುರುತು ಸ್ಪಷ್ಟವಾಗಿ ಕಂಡು ಬಂದಿಲ್ಲ. ಕಪ್ಪು ನೀಲಿ ಮತ್ತು ಕೇಸರಿ ಬಣ್ಣದ ಪಾಲಿಸ್ಟರ್ ಸೀರೆ, ಕೆಂಪು ಬಣ್ಣದ ರವಿಕೆ, ತಿಳಿ ಪಾಚಿ ಬಣ್ಣದ ಕಾಟನ್ ಲಂಗ, ಬಿಳಿ ಮತ್ತು ಗುಲಾಬಿ ಬಣ್ಣದ ತುಂಬು ತೋಳಿನ ಉಲನ್ ಸ್ವೆಟರ್ ಇದೆ. ಮೃತದೇಹ ಹಾಸನ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿದೆ. ಮೃತರ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿಗಳು, ಮೈಸೂರು ರೇಲ್ವೆ ಪೊಲೀಸ್ ಠಾಣೆ ಅವರನ್ನು ಅಥವಾ ದೂ. 0821-2516579 ಮತ್ತು ಹಾಸನ ಹೊರ ಉಪಠಾಣೆಯ ದೂ. 08172-268617 ಸಂಪರ್ಕಿಸಬಹುದು.