ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಮನವಿ
ಕ.ಪ್ರ.ವಾರ್ತೆ ಹುಣಸೂರು ಜೂ. 12
ಪ್ರಸ್ತುತ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದರೆ ಸಾಲದು. ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ದೇಶಭಕ್ತಿ ಜೊತೆಗೆ ಪರಿಸರ ಕಾಪಾಡುವಂತೆ ಜಿಪಂ ಸದಸ್ಯೆ ಡಾ. ಪುಷ್ಪಾವತಿ ಅಮರನಾಥ್ ಮನವಿ ಮಾಡಿದರು.
ಇಲ್ಲಿನ ರೋಟರಿ ಭವನದಲ್ಲಿ 2012- 13ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿದ ರೋಟರಿ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ, ಶಿಕ್ಷಣದ ಜೊತೆ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸನ್ನದ್ಧರಾಗಿ, ಪ್ರತಿ ಮನೆಯ ಸುತ್ತಮುತ್ತ ಗಿಡ ನೆಡುವ ಮೂಲಕ ಪರಿಸರ ಕಾಪಾಡುವಂತೆ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುಣಮಟ್ಟ ಶಿಕ್ಷಣ ಪಡೆಯುವ ಮೂಲಕ ದೇಶದ ಉತ್ತಮ ಪ್ರಜೆಯಾಗಿ, ದೇಶಪ್ರೇಮ ಬೆಳೆಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿಗೆ ಬುನಾದಿ ಹಾಕಲು ಸಾಧ್ಯ ಎಂದು ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷ ಆರ್. ಅನಂದ್ ಮಾತನಾಡಿ, ಪಿಯು ಕಾಲೇಜು ತೆರೆಯಲು ಸರ್ಕಾರ ಅನುಮತಿ ನೀಡಿದ್ದು, 2014- 15ನೇ ಸಾಲಿನಿಂದ ವಿಜ್ಞಾನ ಮತ್ತು ವಾಣಿಜ್ಯ ವಿಭಾಗವನ್ನು ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು. ನಿವೃತ್ತ ಶಿಕ್ಷಕ ಬಸವರಾಜು, ಶಾಲಾ ಅಧ್ಯಕ್ಷೆ ಡಾ. ಸರೋಜಿನಿ ವಿಕ್ರಂ, ರೋಟರಿ ಕ್ಲಬ್ ಕಾರ್ಯದರ್ಶಿ ಹನಗೋಡು ನಟರಾಜು, ನಿಯೋಜಿತ ಅಧ್ಯಕ್ಷ ರಾಜಶೇಖರ್ ಹಾಗೂ ರೋಟರಿ ಸದಸ್ಯರಾದ ಸ್ವಾಮಿಗೌಡ, ಶಿವಕುಮಾರ್, ಅಶೋಕಕುಮಾರ್, ನಾಂಗೇಂದ್ರ ಗುಪ್ತ, ಮುಖ್ಯ ಶಿಕ್ಷಕ ರೇಣುಕಾಪ್ರಸಾದ್ ಮಾತನಾಡಿದರು.
ಅಭಿನಂದನೆ: ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದ ಶಾಲೆಯ ವೈಷ್ಣವಿ ಸೇರಿದಂತೆ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ವೇತನ ಪಡೆಯದೆ, ತಮ್ಮ ಬಿಡುವಿನ ವೇಳೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರೋಟರಿ ಸದಸ್ಯ ತಂಗಮಾರಿಯಪ್ಪನ್ ಮತ್ತು ಪತ್ನಿ ತೆನ್ಮುರುಳಿ ಎಂಬವರನ್ನು ರೋಟರಿ ಸಂಸ್ಥೆ ಅಭಿನಂದಿಸಿದರು.
ಪೋಷಕ ವರ್ಗ ಮತ್ತು ವಿದ್ಯಾರ್ಥಿಗಳು ಮಾತನಾಡಿ, ಶಾಲೆಯ ಶಿಕ್ಷಕರನ್ನು ಅಭಿನಂದಿಸಿದರು. ಶಿಕ್ಷಕಿ ರೂಪ ನಿರೂಪಿಸಿದರು. ಲಕ್ಷ್ಮಿ ವಂದಿಸಿದರು.