ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಲು ಸಲಹೆ

Rashmi Kasaragodu
Updated On : 12 Jun 2013, 11:42 am

ಮೈಸೂರು: ಎಲ್ಲಾ ಸಹಕಾರ ಸಂಘಗಳು ಜವಾಬ್ದಾರಿಯುತವಾಗಿ ಮತ್ತು ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು, ತಪ್ಪಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಸಹಕಾರ ಸಂಘಗಳ ನಿವೃತ್ತ ಹೆಚ್ಚುವರಿ ನಿಬಂಧಕ ಸಿ.ಎಸ್. ಪರಶಿವಮೂರ್ತಿ ಹೇಳಿದರು.
ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಬುಧವಾರ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಮತ್ತು ಸಹಕಾರ ಇಲಾಖೆ ಸಂಯುಕ್ತವಾಗಿ ವಿವಿಧ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯದರ್ಶಿಗಳಿಗೆ ಸಹಕಾರ ಸಂಘಗಳ ತಿದ್ದುಪಡಿ ಕಾಯಿದೆ- 2012ರ ನಿಯಮ ಅಳವಡಿಕೆ ಸಂಬಂಧ ಏರ್ಪಡಿಸಿದ್ದ ಒಂದು ದಿನದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಂಘಗಳಿಗೆ ಸ್ವಾಯತ್ತತೆ ನೀಡಿದ ಬಳಿಕ ಉಪಯೋಗದಷ್ಟೆ ಪ್ರಮಾಣದಲ್ಲಿ ದುರುಪಯೋಗವೂ ನಡೆದಿದೆ. ಸರ್ಕಾರ ಸಹಕಾರ ಆಡಳಿತದಲ್ಲಿ ಮಧ್ಯೆ ಪ್ರವೇಶಿಸಬಾರದು ಎಂಬ ಕಾರಣಕ್ಕೆ ಸ್ವಾಯತ್ತತೆ ನೀಡಿತು. ಈಗ ಸಹಕಾರ ಸಂಘಗಳ ಸ್ಥಾಪನೆ, ರಚನೆ, ಚುನಾವಣಾ ವ್ಯವಸ್ಥೆ, ಸಂಘಗಳ ರದ್ಧತಿ, ಅಮಾನತು ಮುಂತಾದ ವಿಷಯಕ್ಕೆ ಸಂಬಂಧಿಸಿದಂತೆ ನೀತಿ ರೂಪಿಸಿದೆ ಎಂದರು.
ಲೆಕ್ಕಪತ್ರದ ಮಾಹಿತಿ ಪಡೆಯುವುದು ಪ್ರತಿ ಸದಸ್ಯನ ಹಕ್ಕು. ಆದ್ದರಿಂದ ಎಲ್ಲಾ ಸಹಕಾರಿ ಸಂಘಗಳು ಜವಾಬ್ದಾರಿಯುತವಾಗಿ ಮತ್ತು ಕಾನೂನು ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು. ತಪ್ಪಿದರೆ ಅದು ಶಿಕ್ಷಾರ್ಹ ಮತ್ತು ಜೈಲುವಾಸದ ಅಪರಾಧ ಎಂದು ತಿದ್ದುಪಡಿಯಲ್ಲಿ ಸೇರಿಸಲಾಗಿದೆ ಎಂದು  ವಿವರಿಸಿದರು.
ಅನುಚ್ಚೇದ 19ರ ಅನ್ವಯ ಯಾವುದೇ ಅರ್ಹ ವ್ಯಕ್ತಿ ಸಹಕಾರ ಸಂಘದ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದಾಗ ಅದನ್ನು ನಿರಾಕರಿಸುವಂತಿಲ್ಲ. ಆತ ಮಾನಸಿಕ ಅಸ್ವಸ್ಥ ಮತ್ತು ಕ್ರಿಮಿನಲ್ ಹಿನ್ನೆಲೆ ಹೊಂದಿದ ಬಗ್ಗೆ ಸೂಕ್ತ ದಾಖಲಾತಿ ಇದ್ದರೆ ಮಾತ್ರ ನಿರಾಕರಿಸಬಹುದು. ತಪ್ಪಿದರೆ ಆತನ ಸದಸ್ಯತ್ವ ನಿರಾಕರಿಸಲಾಗದು. ಅಲ್ಲದೆ, ಜಾಗೃತ ಸದಸ್ಯರು ಇರಬೇಕು. ಸಂಘದ ಕಾರ್ಯನಿರ್ವಹಣೆಯಲ್ಲಿ ಪಾಲ್ಗೊಳ್ಳುತ್ತಿರಬೇಕು. ಎಲ್ಲಾ ಸಹಕಾರಿ ಸಂಘಗಳು ಕೂಡಲೆ ತಮ್ಮ ಸದಸ್ಯರ ಪಟ್ಟಿ ಪ್ರಕಟಿಸಬೇಕು ಎಂದರು.
ಪ್ರಾಸ್ತಾವಿಕ ಭಾಷಣ ಮಾಡಿದ ಸಹಕಾರ ಸಂಘಗಳ ಉಪ ನಿಬಂಧಕ ಎಚ್. ಜೋಷಿ, ನಿಯಮ ಉಲ್ಲಂಘಿಸುವ ಸಹಕಾರಿ ಸಂಘಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ತಿದ್ದುಪಡಿ ಮಾಡಲಾಗಿದೆ. ಆದ್ದರಿಂದ ಕಾನೂನು ಚೌಕಟ್ಟಿನಲ್ಲಿ ಪಾರದರ್ಶಕ ಆಡಳಿತ ನೀಡಬೇಕು ಎಂದರು.
ಮೈಸೂರು ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕ ಡಾ. ಎಚ್.ಆರ್. ಕೃಷ್ಣಯ್ಯಗೌಡ, ಪಿ. ಶಶೀಧರ್, ಎನ್.ಟಿ. ಮರೀಗೌಡ, ಪಾರ್ಥಸಾರಥಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement