ಮೂಲ ಸೌಲಭ್ಯಕ್ಕೆ ಒತ್ತಾಯ
ಮೈಸೂರು: ಇಲ್ಲಿನ ಗೌರಿಶಂಕರ ನಗರಕ್ಕೆ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಸರ್ವಜನಾಂಗ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ. ನಂಜನಗೂಡು ರಸ್ತೆಯ ದತ್ತ ನಗರದ ಪೂರ್ವಕ್ಕೆ, ಗೌರಿಶಂಕರ ನಗರದ ಉತ್ತರಕ್ಕೆ ಹೊಂದಿಕೊಂಡಂತಿರುವ ಮಹಾನಗರ ಪಾಲಿಕೆಗೆ ಸೇರಿದ ಸರ್ವೇ ನಂ. 103 ರಲ್ಲಿ ಸುಮಾರು 10 ಎಕರೆಗೂ ಹೆಚ್ಚು ಜಾಗವಿದೆ. ಅದನ್ನು ತಂತಿ ಬೇಲಿ ಹಾಕಿ ರಕ್ಷಿಸಲಾಗಿದೆ. ಇಲ್ಲಿ ಸ್ಥಳೀಯ ನಿವಾಸಿಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ವೇದಿಕೆ ಅಧ್ಯಕ್ಷ ಉಡಿಗಾಲ ಎಲ್. ಮಹದೇವಪ್ಪ ಮನವಿ ಮಾಡಿದ್ದಾರೆ. ದತ್ತನಗರ, ಗುಂಡೂರಾವ್ ನಗರ, ಕನಕಗಿರಿ, ಸೊಳ್ಳೇಪುರ, ಗೌರಿಶಂಕರ ನಗರ, ಸುತ್ತೂರು ಮಠ, ಪಂಚಗವಿ ಮಠ, ಆದಿ ಚುಂಚನಗಿರಿ ಆಶ್ರಮ, ಗಣಪತಿ ಸಚ್ಚಿದಾನಂದ ಆಶ್ರಮ, ದೃತಿಶೀಲಾನಂದ ಆಶ್ರಮ, ಕೈಲಾಸ ಆಶ್ರಮ, ಅಯ್ಯಪ್ಪಸ್ವಾಮಿ ದೇವಸ್ಥಾನ, ಕಬೀರ ಆಶ್ರಮ, ಜೇನುಗವಿ ನಂಜುಂಡಸ್ವಾಮಿಗಳ ಆಶ್ರಮ, ಚಾಮುಂಡಿ ಬೆಟ್ಟ ಇದೆ. ನಗರ ಪಾಲಿಕೆ ಅಥವಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸುವ ಬಡಾವಣೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಂಥ ಭಂಡಾರ, ವಾಚನಾಲಯ, ಮಕ್ಕಳ ಉದ್ಯಾನವನ, ರಂಗ ಮಂದಿರ ಇರಬೇಕು ಎಂಬ ನಿಯಮ ಇದೆ. ಆದರೆ, ಈ ಬಡಾವಣೆಯಲ್ಲಿ 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದರೂ ಮೂಲ ಸೌಲಭ್ಯ ಇಲ್ಲ. ಕೂಡಲೆ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.