ಸ್ವಸಹಾಯ ಸಂಘಗಳಿಗೆ ಆದ್ಯತೆ ನೀಡಿ
ಕ.ಪ್ರ.ವಾರ್ತೆ ಸಾಲಿಗ್ರಾಮ ಜೂ. 12
ಮಹಿಳಾ ಸ್ವ ಸಹಾಯ ಸಂಘಗಳಿಗೆ ಆದ್ಯತೆ ನೀಡಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಹೇಳಿದರು.
ಸಾಲಿಗ್ರಾಮದ ಚುಂಚನಕಟ್ಟೆ ರಸ್ತೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖೆ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲೆ ಹುಟ್ಟಿ ಬೆಳೆದ ನನ್ನ ಗ್ರಾಮ ಈ ತಾಲೂಕಿಗೆ ಸೇರಿದೆ. ಹಳ್ಳಿ ಪ್ರದೇಶಗಳಲ್ಲಿ ರೈತರಿಗೆ ಹಾಗೂ ಮಹಿಳಾ ಸ್ವ ಸಹಾಯ ಸಂಘಗಳಿಗೆ ಹೆಚ್ಚಿನ ರೀತಿಯಲ್ಲಿ ಪ್ರಾಮುಖ್ಯತೆ ನೀಡುತ್ತೇವೆ. ರಾಷ್ಟ್ರ ಮಟ್ಟದಲ್ಲಿ ಸತತವಾಗಿ 6ನೇ ಬಾರಿ ನಬಾರ್ಡ್ ವತಿಯಿಂದ ಪ್ರಶಸ್ತಿಗಳು ಲಭಿಸಿರುವುದು ಸಂತೋಷದಾಯಕ ಎಂದು ಹರ್ಷ ವ್ಯಕ್ತಪಡಿಸಿದರು.
ಕಾವೇರಿ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಡಿ. ಸೋಮಶೇಖರಶಾಸ್ತ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಬ್ಯಾಂಕಿನ 337ನೇ ಶಾಖೆಯನ್ನು ಈ ಗ್ರಾಮದಲ್ಲಿ ಪ್ರಾರಂಭಿಸಿದ್ದು, ಈ ತಾಲೂಕಿನಲ್ಲಿ 9ನೇ ಶಾಖೆಯಾಗಿದೆ. ಈ ಬ್ಯಾಂಕಿನಲ್ಲಿ ಎಟಿಎಂ ಸೌಲಭ್ಯವನ್ನು ಮುಂದಿನ ತಿಂಗಳಿನಿಂದ ಪ್ರಾರಂಭಿಸಲಾಗುವುದು. ಈ ವರ್ಷದಲ್ಲಿ 80 ಕೋಟಿಗಳ ವ್ಯವಹಾರವನ್ನು ನಮ್ಮ ಶಾಖೆ ವತಿಯಿಂದ ವ್ಯವಹರಿಸಿದ್ದೇವೆ. ಗ್ರಾಮೀಣ ಭಾಗದ ಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಮಹಾಪ್ರಬಂಧಕರಾದ ಜನಾರ್ದನಯ್ಯ, ಹಾಸನ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕರಾದ ಜಿ.ಎಲ್. ವೆಂಕಟೇಶ್, ನಿಯೋಜಿತ ಪ್ರಾದೇಶಿಕ ವ್ಯವಸ್ಥಾಪಕ ಮಹದೇವಪ್ಪ, ಕಾನೂನು ಸಲಹೆಗಾರ ಗಾಂಧಿ, ಶಾಖಾ ವ್ಯವಸ್ಥಾಪಕ ಬಿ. ವಿಶ್ವಾಸ್ ಹಾಗೂ ಸಿಬ್ಬಂದಿ ವರ್ಗ ಇದ್ದರು.