ಉದ್ಯಾನದಲ್ಲಿ ಗ್ರಂಥಾಲಯ ಆಶಯ
ಡಿ.ಎನ್. ಮಹೇಂದ್ರ
ಕ.ಪ್ರ.ವಾರ್ತೆ ಮೈಸೂರು ಜೂ. 13
ಕಳೆದ ಹದಿನೈದು ವರ್ಷಗಳಿಂದ ಪಾಳು ಬಿದ್ದಿರುವ ಶ್ರೀಪಾದಶಿಲೆ ಉದ್ಯಾನದಲ್ಲಿನ ಕಟ್ಟಡವನ್ನು ವಾಚನಾಲಯಕ್ಕೆ ಬಳಸಿಕೊಳ್ಳುವಂತೆ ಸ್ಥಳೀಯ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಉದ್ಯಾನವನ ವಿವೇಕಾನಂದ ವೃತ್ತಕ್ಕೆ ಕೂಗಳತೆ ದೂರದಲ್ಲಿದ್ದರೂ ಕುವೆಂಪುನಗರ ವ್ಯಾಪ್ತಿಗೆ ಇದು ಸೇರುತ್ತದೆ. ವಾರ್ಡ್ ನಂ.15ರ ವ್ಯಾಪ್ತಿಗೆ ಒಳಪಡುವ ಈ ಉದ್ಯಾನದ ಆವರಣದಲ್ಲಿ 15 ವರ್ಷಗಳ ಹಿಂದೆ ನಗರ ಪಾಲಿಕೆ ಸದಸ್ಯರಾಗಿದ್ದ ಎಲ್. ನಾಗೇಂದ್ರ ಅವರು ಈ ವಾಚನಾಲಯ ಕಟ್ಟಡ ನಿರ್ಮಿಸಿ ಉದ್ಘಾಟಿಸಿದ್ದರು.
ಆದರೆ ಅಲ್ಲಿ ಇಷ್ಟು ದಿನವಾದರೂ ವಾಚನಾಲಯ ಆರಂಭಿಸುವುದಿರಲಿ, ಯಾವುದೆ ಸಾರ್ವಜನಿಕ ಉಪಯೋಗಿ ಕೆಲಸಕ್ಕೂ ಈ ಕಟ್ಟಡ ಬಳಕೆಯಾಗಿಲ್ಲ.
ಉದ್ಯಾನ ನಿರ್ವಹಣೆಗೆ ಬರುವ ಮಾಲಿಗಳು ಗುದ್ದಲಿ, ಕುಡುಗೋಲು, ಬಿಂದಿಗೆ, ಪೈಪ್ ಇಡಲಷ್ಟೇ ಈ ಕಟ್ಟಡ ಬಳಸುತ್ತಿದ್ದಾರೆ. ಈಗ ಕಟ್ಟಡದ ಕಿಟಕಿ ಗಾಜುಗಳು ಸಂಪೂರ್ಣ ಒಡೆದು ಹೋಗಿವೆ. ವಾಚನಾಲಯ ಇರಲಿ, ಕಿರಿದಾದ ಗ್ರಂಥಾಲಯವನ್ನೇ ತೆರೆಯಬಹುದಾದ ಕಟ್ಟಡ ಇದು. ಗ್ರಾಮಾಂತರ ಪ್ರದೇಶದ ಗ್ರಂಥಾಲಯಗಳು ಹೆಚ್ಚು ಕಡಿಮೆ ಇಷ್ಟೆ ದೊಡ್ಡದಿರುತ್ತದೆ.
ವಾಚನಾಲಯ ಆರಂಭಕ್ಕೆ ಸಿದ್ಧತೆ: ಅಷ್ಟು ವಿಶಾಲವಾದ ಈ ಕಟ್ಟಡದಲ್ಲಿ ಏಕೆ ವಾಚನಾಲಯ ಆರಂಭಿಸಬಾರದು ಎಂದು ಸ್ವಾತಂತ್ರ್ಯ ಹೋರಾಟಗಾರ ಜಗದೀಶ್ ಅವರು ಸ್ಥಳೀಯ ಪಾಲಿಕೆ ಸದಸ್ಯರಿಗೆ ಮನವಿ ಸಲ್ಲಿಸಿದ್ದಾರೆ.
ಇದಕ್ಕೆ ಪೂರಕವಾಗಿ ಪಾಲಿಕೆ ಸದಸ್ಯರೂ ಸ್ಪಂದಿಸಿದ್ದಾರೆ. ಈಗ ಕನ್ನಡಪ್ರಭ ಗ್ರಂಥಾಲಯಗಳ ಕುರಿತು ಆರಂಭಿಸಿರುವ ಸುದ್ದಿ ಸರಣಿಯಿಂದ ಮತ್ತಷ್ಟು ಉತ್ತೇಜಿತರಾಗಿರುವ ಅವರು ವಾಚನಾಲಯ ಆರಂಭಿಸಲು ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಯಲ್ಲಿ ತೊಡಗಿದ್ದಾರೆ.
ನಿತ್ಯವೂ ಬೆಳಗಿನ ವೇಳೆ ಈ ಉದ್ಯಾನವನಕ್ಕೆ ನೂರಾರು ಮಂದಿ ವಾಯುವಿಹಾರಕ್ಕೆ ಮತ್ತು ವಿಶ್ರಾಂತಿ ತೆಗೆದುಕೊಳ್ಳಲು ಬರುತ್ತಾರೆ. ಅವರು ಒಂದಷ್ಟು ಸಮಯ ವಾಚನಾಲಯದಲ್ಲಿ ಸಮಯ ಕಳೆಯಲು ಉತ್ಸುಕರಾಗಿದ್ದಾರೆ. ಇಲ್ಲಿ ವಾಚನಾಲಯ ಆರಂಭಿಸಿದರೆ ಪಕ್ಕದಲ್ಲೆ ಇರುವ ಕುವೆಂಪುನಗರ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂಬುದು ಇವರ ಆಶಯ.
ಪಾಲಿಕೆ ಆಯುಕ್ತರ ಜತೆ ಮಾತನಾಡಿ ಆ ಕಟ್ಟಡವನ್ನು ವಾಚನಾಲಯಕ್ಕೆ ಬಳಸಿಕೊಳ್ಳಲು ಚಿಂತಿಸಲಾಗಿದೆ. ಆ ಉದ್ಯಾನಕ್ಕೆ ಹೆಚ್ಚು ಮಂದಿ ವಯಸ್ಸಾದವರು ಬರುತ್ತಾರೆ. ಅವರು ಗ್ರಂಥಾಲಯ ಹುಡುಕಿ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಇಲ್ಲಿ ವಾಚನಾಲಯ ಅಗತ್ಯ. ಅಲ್ಲದೆ ನಾವು ಈಗಷ್ಟೆ ಆಯ್ಕೆಯಾಗಿದ್ದೇವೆ. ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿಲ್ಲ. ಬಳಿಕ ವಾಚನಾಲಯ ಮತ್ತು ಉದ್ಯಾನವನ ಅಭಿವೃದ್ಧಿಪಡಿಸಲಾಗುವುದು.
ಮಂಜುಳಾ ಮಾನಸ, ಪಾಲಿಕೆ ಸದಸ್ಯೆ
ಕಟ್ಟಡವನ್ನು ಅನುಪಯುಕ್ತವಾಗಿ ಇಡುವ ಬದಲು ವಾಚನಾಲಯ ಆರಂಭಿಸಿದರೆ ಬಹಳ ಮಂದಿಗೆ ಅನುಕೂಲವಾಗುತ್ತದೆ. ಎಲ್. ನಾಗೇಂದ್ರ ಅವರು ಪಾಲಿಕೆ ಸದಸ್ಯರಾಗಿದ್ದ ಅವಧಿಯಲ್ಲಿ ವಾಚನಾಲಯದ ಉದ್ದೇಶಕ್ಕಾಗಿಯೆ ಈ ಕಟ್ಟಡ ನಿರ್ಮಿಸಲಾಯಿತು. ಆದರೆ ಇದುವರೆಗೂ ಈ ವಾರ್ಡ್ ಪ್ರತಿನಿಧಿಸಿದ ಸದಸ್ಯರು ಈ ಬಗ್ಗೆ ಗಮನ ಹರಿಸಿಲ್ಲ. ಈಗಿನ ಸದಸ್ಯೆ ಮಂಜುಳಾ ಅವರು ಈ ಬಗ್ಗೆ ಆಸಕ್ತಿ ವಹಿಸಿದ್ದಾರೆ. ನಾವು ಸಹ ಅವರಿಗೆ ವಾಚನಾಲಯ ತೆರೆಯುವಂತೆ ಮನವಿ ಸಲ್ಲಿಸಿದ್ದೇವೆ.
ಜಗದೀಶ್, ಸ್ವಾತಂತ್ರ್ಯ ಹೋರಾಟಗಾರರು.
ಸ್ಥಳೀಯ ಪಾಲಿಕೆ ಸದಸ್ಯರು ಕಟ್ಟಡವನ್ನು ನೀಡುವುದಾದರೆ ನಾವು ವಾಚನಾಲಯ ಆರಂಭಿಸಲು ಸಿದ್ಧರಿದ್ದೇವೆ. ಅಲ್ಲಿನ ಪಾಲಿಕೆ ಸದಸ್ಯರು ವಾಚನಾಲಯ ಆರಂಭಿಸುವ ಸಂಬಂಧ ನಮಗೊಂದು ಮನವಿ ಪತ್ರ ಸಲ್ಲಿಸಿದರೆ ಖಂಡಿತವಾಗಿಯೂ ವಾಚನಾಲಯ ಆರಂಭಿಸುತ್ತೇವೆ.
ಬಿ. ಮಂಜುನಾಥ್, ಉಪ ನಿರ್ದೇಶಕರು, ಗ್ರಂಥಾಲಯ ಇಲಾಖೆ