ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎನ್ಟಿಎಂಎಸ್ ಮುಚ್ಚಿದರೆ ತಾತಯ್ಯರ ಆಶಯ ಭಗ್ನ

Rashmi Kasaragodu
Updated On : 14 Jun 2013, 12:08 pm

ಕ.ಪ್ರ.ವಾರ್ತೆ   ಮೈಸೂರು   ಜೂ. 13
ನಗರದ ನಾರಾಯಣ ಶಾಸ್ತಿರ ರಸ್ತೆಯ ಮಹಾರಾಣಿ ಮಾದರಿ ಕನ್ನಡ ಶಾಲೆಯನ್ನು ಮುಚ್ಚಿದರೆ ವೃದ್ಧ ಪಿತಾಮಹ ಎಂ.ವೆಂಕಟಕೃಷ್ಣಯ್ಯ (ತಾತಯ್ಯ) ಅವರ ಆಶಯ ಭಗ್ನವಾಗಲಿದೆ ಎಂದು ಸಂಸ್ಕೃತಿ ಪೋಷಕ ಕೆ. ರಘುರಾಂ ಆತಂಕ ವ್ಯಕ್ತಪಡಿಸಿದರು.
ವೆಂಕಟಗಿರಿ ಪ್ರಕಾಶನ ಹಾಗೂ ಹಿರಣ್ಮಯಿ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಕೃಷ್ಣಮೂರ್ತಿಪುರಂನ ಭಗಿನಿ ಸೇವಾ ಸಮಾಜ ಬಾಲಿಕಾ ಪ್ರೌಢಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಸಾಹಿತ್ಯ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ 1912 ರಲ್ಲಿ ಅನಾಥಾಲಯವಾಗಿದ್ದ ಕಟ್ಟಡವನ್ನು ತಾತಯ್ಯ ಅವರು ಎನ್ಟಿಎಂಎಸ್ ಶಾಲೆಗೆ ನೀಡಿದರು. ಅಲ್ಲಿದ್ದ ಅನಾಥಾಲಯವನ್ನು ಶಾಂತಲಾ ಚಿತ್ರಮಂದಿರದ ಬಳಿ ಇರುವ ಜಾಗಕ್ಕೆ ಸ್ಥಳಾಂತರಿಸಿದರು. ಅಲ್ಲದೆ ಶಿಕ್ಷಕಿಯೂ ಆಗಿದ್ದ ಅವರ ಪತ್ನಿ ಅದರ ಉಸ್ತುವಾರಿ ವಹಿಸಿದ್ದರು. ಸುಮಾರು 100 ವರ್ಷ ಹಳೆಯದಾದ ಆ ಕನ್ನಡ ಶಾಲೆಯನ್ನು ಮುಚ್ಚಲು ಹೊರಟಿರುವುದು ಸರಿಯಲ್ಲ. ಅದನ್ನು ಉಳಿಸುವ ಮೂಲಕ ತಾತಯ್ಯರ ಆಶಯ ಈಡೇರಿಸಬೇಕಿದೆ ಎಂದರು.
ಸೇವಾ ಕಾರ್ಯಕ್ಕೆ ಸಂದ ಗೌರವ: ತಾತಯ್ಯ ಎಂದೇ ಖ್ಯಾತರಾಗಿದ್ದ ವೆಂಕಟಕೃಷ್ಣಯ್ಯ ಅವರ ದೂರದೃಷ್ಟಿಯ ಫಲವಾಗಿ ಎನ್ಟಿಎಂಎಸ್ ಶಾಲೆ ಆರಂಭವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮಾರ್ಗದರ್ಶಕರೂ ಆಗಿದ್ದ ಅವರು ಶಿಕ್ಷಣ ತಜ್ಞರಾಗಿ ಅನೇಕ ಶಾಲೆಗಳನ್ನು ತೆರೆದರು. ಅಲ್ಲದೆ ಸಮಾಜ ಸೇವಕರಾಗಿದ್ದರು. ರಾಜರ ಪ್ರತಿಮೆಯಂತೆ ಅವರ ಪ್ರತಿಮೆಯನ್ನು ನಗರದಲ್ಲಿ ಸ್ಥಾಪಿಸಿರುವುದು ಅವರ ಸೇವಾ ಕಾರ್ಯಕ್ಕೆ ಸಂದ ಗೌರವ ಎಂದು ರಘುರಾಂ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ.ನೀ. ಗಿರಿಗೌಡ, ಕಾವ್ಯಗಳಿಗಿಂತ ಮಹಾಕಾವ್ಯಗಳು ಚಿರನೂತನ. ಯಾವುದೋ ಕಾಲದಲ್ಲಿ ರಚಿಸಿದ ರಾಮಾಯಣ ಹಾಗೂ ಮಹಾಭಾರತ ಇಂದಿಗೂ ಪ್ರಖ್ಯಾತಿಯಾಗಿವೆ. ಆ ಮೂಲಕ ಅದನ್ನು ರಚಿಸಿದ ಕವಿಗಳು ಜೀವಂತವಾಗಿದ್ದಾರೆ. ಮಹಾಕಾವ್ಯಗಳು ಜೀವನದ ಮೌಲ್ಯಗಳನ್ನು ತಿಳಿಸಲಿದೆ ಎಂದರು.
2013ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಶೇ.90ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ ವೈಷ್ಣವಿ, ಅನರ್ಘ್ಯ ಹಾಗೂ ಎಂ.ಎನ್. ತಾರಾ ಅವರನ್ನು ಭಗಿನಿ ಸೇವಾ ಸಮಾಜದ ಆಡಳಿತಾಧಿಕಾರಿ ಪಿ. ಶ್ರೀನಿವಾಸ್ ಸನ್ಮಾನಿಸಿದರು. ನಿವೃತ್ತ ಪ್ರಾಧ್ಯಾಪಕ ಎಸ್.ದ್ವಾರಕಿ ಆಯ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಂದ್ರವದನರಾವ್ ರಚಿರುವ ಸಾಹಿತ್ಯ ಚಿತ್ತಾರ ಕೃತಿಗಳನ್ನು ವಿತರಿಸಿದರು. ಮುಖ್ಯಶಿಕ್ಷಕಿ ವಿಶಾಲಕ್ಷಮ್ಮ ಅತಿಥಿಯಾಗಿದ್ದರು. ಹಿರಣ್ಮಯಿ ಪ್ರತಿಷ್ಠಾನದ ಸಂಸ್ಥಾಪಕ ಎ.ಸಂಗಪ್ಪ ಸ್ವಾಗತಿಸಿದರು. ಮುರಳೀಧರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement